ಮಡಿಕೇರಿ, ಆ. ೧೫: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭೂಮಿ, ವಸತಿ ಹಾಗೂ ನಿವೇಶನ ವಂಚಿತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬರಿಹೊಟ್ಟೆ ಸತ್ಯಾಗ್ರಹ ನಡೆಸಿದರು.
ಆ.೧೪ ಮತ್ತು ೧೫ ರಂದು ಧರಣಿ ನಡೆಸಲು ಉದ್ದೇಶಿಸಲಾಗಿತ್ತಾದರೂ ಸೋಮವಾರ ಸಂಜೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟ ಸಮಿತಿಯ ಪ್ರಮುಖ ರನ್ನು ಕರೆಯಿಸಿಕೊಂಡು ಬೇಡಿಕೆಗಳ ಕುರಿತು ಚರ್ಚಿಸಿ ಸೂಕ್ತ ಭರವಸೆ ನೀಡಿದ ಹಿನ್ನೆಲೆ ಸತ್ಯಾಗ್ರಹವನ್ನು ಸ್ಥಗಿತಗೊಳಿಸಲಾಯಿತು.
ಪ್ರಮುಖ ಹೋರಾಟಗಾರರಾದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮತ್ತಿತರರು ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.
ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಆ.೨೦ ರ ನಂತರ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದರು.
ಮಾಜಿ ಸಚಿವ ಹೆಚ್. ಆಂಜನೇಯ ಅವರು ಧರಣಿ ನಿರತರ ಬಳಿ ತೆರಳಿ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ವಿವರಿಸಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಅಲ್ಲದೆ ಬರಿ ಹೊಟ್ಟೆಯಲ್ಲಿದ್ದ ಧರಣಿ ನಿರತರಿಗೆ ಬಾಳೆಹಣ್ಣನ್ನು ನೀಡಿ ಸತ್ಯಾಗ್ರಹವನ್ನು ಅಂತಿಮಗೊಳಿಸಿದರು.
ಕೊಡಗು ಜಿಲ್ಲೆಯ ೩೦೦ ಕ್ಕೂ ಅಧಿಕ ಹಾಗೂ ರಾಜ್ಯದ ವಿವಿಧ ಭಾಗಗಳ ಹೆಚ್ಚಿನ ಸಂಖ್ಯೆಯ ಭೂಮಿ ಮತ್ತು ವಸತಿ ವಂಚಿತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಗಳು :
ಭೂಮಿ ನೀಡಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ, ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಮತ್ತು ಹೋರಾಟದ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ಕರೆಯಬೇಕು.
ಭೂಮಿ, ನಿವೇಶನ ಮತ್ತು ಮನೆಗಳ ಮಂಜೂರಾತಿ ಪ್ರಕ್ರಿಯೆ ಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲು "ಹೈ ಪವರ್ ಕಮಿಟಿ"ಯನ್ನು ರಚಿಸಬೇಕು. ಈ ಹಿಂದಿನAತೆ ಇದರಲ್ಲಿ ಹೋರಾ ಟದ ಪ್ರತಿನಿಧಿಗಳೂ ಇರಬೇಕು. ಉನ್ನತ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯವನ್ನು ಸುಲಲಿತಗೊಳಿಸಲು ಒಬ್ಬರು ಸಂಪುಟ ದರ್ಜೆ ಮಂತ್ರಿಗಳ ಉಸ್ತುವಾರಿ ಇರಬೇಕು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಭೂ ಮಂಜೂರಾತಿ ಸಮಿತಿಗಳನ್ನು ತಕ್ಷಣ ರಚಿಸಬೇಕು. ಈ ಸಮಿತಿಗಳಲ್ಲಿ ಭೂಮಿ ಮತ್ತು ವಸತಿ ಹೋರಾಟದ ಒಬ್ಬ ಪ್ರತಿನಿಧಿ ಇರಬೇಕು. ರೈತರು ಹಾಗೂ ಜನಪರ ಹೋರಾಟಗಾರರ ಮೇಲೆ ಅರಣ್ಯ ಮತ್ತು ಪೊಲೀಸ್ ಇಲಾಖೆ ದಾಖಲಿಸಿರುವ ದೂರು ಪ್ರಕರಣಗಳನ್ನು ರದ್ದುಗೊಳಿಸಬೇಕು.
೫ ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ, ಅರಣ್ಯ ಭೂಮಿಯಲ್ಲಿರುವ ಯಾವುದೇ ಅರ್ಜಿದಾರರನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸಬಾರದು ಎಂದು ಧರಣಿ ನಿರತರು ಒತ್ತಾಯಿಸಿದರು.