ಚೆಯ್ಯಂಡಾಣೆ, ಆ. ೧೩: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲಾ ವಿಭಾಗದಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ನ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿಯ ಇಂಟರಾಕ್ಟ್ ಸಮಿತಿಯ ಅಧ್ಯಕ್ಷ ಸೋನಾಜಿತ್, ಪದಗ್ರಹಣಾಧಿ ಕಾರಿಯಾಗಿ ಪ್ರಮಾಣ ವಚನ ಬೋಧಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿ ರೋಟರಿಯ ವಿದ್ಯಾರ್ಥಿ ಘಟಕಗಳು ಸಹಕಾರಿ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ೧೨ ವರ್ಷಗಳ ಹಿಂದೆ ಇಂಟ್ರಾಕ್ಟ್ ಘಟಕ ಪ್ರಾರಂಭಿಸಿದ್ದು, ಅತ್ಯಂತ ಸಕ್ರಿಯವಾಗಿ ವಿದ್ಯಾರ್ಥಿಗಳು ಕಾರ್ಯಯೋಜನೆ ಕೈಗೊಳ್ಳುತ್ತಿದ್ದಾರೆ. ಇದರ ಮೂಲಕ ಸಾಮಾಜಿಕ ಬದ್ಧತೆಯನ್ನು ಈ ವಿದ್ಯಾರ್ಥಿಗಳಲ್ಲಿ ಕಾಣಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿಯ ಜಗದೀಶ್ ರೈ, ಕುಲ್ಲೇಟಿರ ಅಜಿತ್ ನಾಣಯ್ಯ, ಕಾರ್ಯಪ್ಪ, ಶಾಲೆಯ ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣಳಾದ ವಿದ್ಯಾರ್ಥಿನಿ ಫಾತಿಮತ್ ಶೈಮ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಅಶ್ವಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ವತಿಯಿಂದ ಶೈಮಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ನೂತನ ಸಮಿತಿಗೆ ವಿದ್ಯಾರ್ಥಿಗಳಾದ ಮೊಹಮ್ಮದ್ ಆಸ್ಕರ್ ಅಧ್ಯಕ್ಷನಾಗಿ, ಮುನೀರ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಘಟಕದ ಸಂಯೋಜಕಿ ಶಿಕ್ಷಕಿ ಉಷಾರಾಣಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹಿತನುಡಿ ಗಳನ್ನಾಡಿದರು. ಸಂಯೋಜಕಿ ಶಿಕ್ಷಕಿ ಕೆ.ಬಿ. ಉಷಾರಾಣಿ, ಶಾಲೆಯ ಎಲ್ಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಸೋನಿಕ ನಿರೂಪಿಸಿದರು. ಮುನೀರ ಕಳೆದ ಸಾಲಿನ ವರದಿ ವಾಚಿಸಿದರು. ಸಿಂಚನ ರೈ ಲೆಕ್ಕಪತ್ರ ಮಂಡಿಸಿದರು, ಮುನವಿರುನ್ನಿಸ ವಂದಿಸಿದರು.