ಮಡಿಕೇರಿ, ಆ. ೧೩: ಬಹುಅಂಗಾಗ ವೈಫಲ್ಯ ಸೇರಿದಂತೆ ಇನ್ನಿತರ ಕಾಯಿಲೆಯಿಂದ ಬಳಲಿದ ಸಾಕಾನೆಯೊಂದು ಮತ್ತಿಗೋಡು ಶಿಬಿರದಲ್ಲಿ ಕೊನೆಯುಸಿರೆಳೆದಿದೆ.

ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಪಳಗಿಸಲಾಗುತ್ತಿದ್ದ ಅಂದಾಜು ೫೦ ವರ್ಷದ ಪ್ರಾಯದ ಸುಬ್ರಮಣಿ ಆನೆ ಇಹಲೋಕ ತ್ಯಜಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಅರಣ್ಯ ಭಾಗದಲ್ಲಿ ಉಪಟಳ ನೀಡುತ್ತಿದ್ದ ಈ ಆನೆ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಅಭಿಮನ್ಯು ಆನೆಯ ಸಹಾಯದಿಂದ ಕಳೆದ ೩ ತಿಂಗಳ ಹಿಂದೆ ಸೆರೆಹಿಡಿದು ಮತ್ತಿಗೋಡಿಗೆ ಸ್ಥಳಾಂತರಿಸಿ ಕ್ರಾಲ್‌ನಲ್ಲಿಟ್ಟು ತರಬೇತಿ ನೀಡಲಾಗುತಿತ್ತು.

ಜುಲೈ ೨೦ ರಂದು ಕ್ರಾಲ್‌ನಿಂದ ಹೊರಗಡೆ ಸ್ಥಳಾಂತರಿಸಿ ತರಬೇತಿ ನೀಡಲು ಆರಂಭಿಸಲಾಗಿತ್ತು. ತಾ. ೧೧ ರಂದು ಬೆಳಿಗ್ಗೆ ೧೧ ಘಂಟೆ ಸುಮಾರಿಗೆ ಅಸ್ವಸ್ಥಗೊಂಡು ಮಲಗಿಕೊಂಡಿದ್ದ ಆನೆಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಮೇಲೇಳಿಸಲು ಪ್ರಯತ್ನ ಮಾಡಿದರೂ ಆನೆಯು ಮೇಲೇಳಲಾಗದೆ ಮಲಗಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಕ್ರೇನ್ ತರಿಸಿ ಎದ್ದು ನಿಲ್ಲಿಸಲು ಪ್ರಯತ್ನಿಸಿದರೂ ಆನೆಯು ಎದ್ದು ನಿಲ್ಲಲು ಸಾಧ್ಯವಾಗದೆ ಮಲಗಿದ್ದ ಸ್ಥಿತಿಯಲ್ಲಿಯೇ ಇತ್ತು. ಮಧ್ಯಾಹ್ನ ೩.೧೫ಕ್ಕೆ ಆನೆ ಮೃತಪಟ್ಟಿದೆ.

ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ, ಹುಣಸೂರು ವನ್ಯಜೀವಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್, ದುಬಾರೆ ಸಾಕಾನೆ ಶಿಬಿರ ಪಶುವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ, ವೆಟರ್‌ನರಿ ಸರ್ಜನ್ ಡಾ.ಮದನ್ ಗೋಪಾಲ್, ನಾಗರಹೊಳೆಯ ಗಂಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭ ಆನೆಗೆ ಬಹುಅಂಗಾಗ ವೈಫಲ್ಯ, ಆರ್ಥರಿಟಿಸ್, ಸೆಪ್ಟೇಸಿಮಿಯ ಸೋಂಕು ಇರುವುದು ದೃಢಪಟ್ಟಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಆನೆಯ ಕಳೇಬರವನ್ನು ಹೂತು ಅಂತ್ಯಸAಸ್ಕಾರ ಮಾಡಲಾಯಿತು.