ಸಿದ್ದಾಪುರ, ಆ. ೧೩: ಗದ್ದೆಯಲ್ಲಿ ಉಳುಮೆ ನಡೆಸಿ ಹಿಂತಿರುಗುತ್ತಿದ್ದ ಕೃಷಿಕನ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. ಸಿದ್ದಾಪುರ ಸಮೀಪದ ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು ಸಮೀಪದ ನೇತಾಜಿ ನಗರದಲ್ಲಿ ಘಟನೆ ನಡೆದಿದೆ.
ಮರಗೋಡು ಗ್ರಾಮದ ಕಟ್ಟೆಮಾಡು ನಿವಾಸಿ ಸಿ.ಬಿ. ದೇವಪ್ಪ(೫೮) ಮೃತ ದುರ್ದೈವಿ. ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು ಸಮೀಪದ ನೇತಾಜಿ ನಗರದ ಕಾಡಮಂಡ ತಿಮ್ಮಯ್ಯ ಎಂಬವರ ಗದ್ದೆಯಲ್ಲಿ ಟ್ರಾö್ಯಕ್ಟರ್ ಮೂಲಕ ಗದ್ದೆ ಉಳುಮೆ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ಬಂದ
೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಒಂಟಿ ಸಲಗವು ಏಕಾಏಕಿ ದಾಳಿ ನಡೆಸಿದೆ. ವಾಹನದಲ್ಲಿದ್ದ ದೇವಪ್ಪನನ್ನು ಎಳೆದು ತುಳಿದು ಹತ್ಯೆ ಮಾಡಿದೆ. ಅಲ್ಲದೆ ವಾಹನವನ್ನು ಮಗುಚಿ ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕೃಷಿಕನನ್ನು ಹತ್ಯೆ ಮಾಡಿದ ಒಂಟಿಸಲಗವು ಸ್ಥಳದಲ್ಲೇ ಬೀಡುಬಿಟ್ಟ ಪರಿಣಾಮ ಮೃತ ವ್ಯಕ್ತಿಯ ಬಳಿಗೆ ತೆರಳಲು ಸ್ಥಳೀಯರು ಹಿಂದೇಟು ಹಾಕಿದ ಘಟನೆ ನಡೆದಿದೆ.
ಉಳುಮೆ ಮುಗಿಸಿ ಟ್ರಾö್ಯಕ್ಟರ್ನಲ್ಲಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿದೆ. ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಲು ಮುಂದಾದ ಸಂದರ್ಭದಲ್ಲಿ ಹತ್ಯೆಗೈದ ಒಂಟಿಸಲಗವು ಮೃತದೇಹದ ಸಮೀಪದಲ್ಲೇ ನಿಂತಿರುವುದು ಗೋಚರವಾದ ಪರಿಣಾಮ, ದಾಳಿಗೊಳಗಾದ ವ್ಯಕ್ತಿಯ ರಕ್ಷಣೆಗೆ ಧಾವಿಸಲು ಸ್ಥಳೀಯರು ಭಯಪಟ್ಟರು. ಕೃಷಿಕ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೃತ ದೇವಪ್ಪನವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕ್ರಮಕ್ಕೆ ಆಗ್ರಹ : ಅರೆಕಾಡು, ಬಳಂಜಿಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದು, ಸ್ಥಳೀಯ ಕೃಷಿಕರು, ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಕೃಷಿ ಬೆಳೆಗಳನ್ನು ನಾಶಪಡಿಸುತ್ತಾ ಸಾರ್ವಜನಿಕರಿಗೆ ತಲೆನೋವಾಗಿದ್ದ ಕಾಡಾನೆಯು ಇದೀಗ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವುದು ವ್ಯಾಪ್ತಿಯ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ ನಿವಾಸಿಗಳು ಅರಣ್ಯ ಇಲಾಖೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ದೇವಪ್ಪನವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ಧಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. - ವರದಿ : ವಾಸು