ಪೊನ್ನಂಪೇಟೆ, ಆ. ೧೩: ದಕ್ಷಿಣ ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ ರೈತ ಬಾಚಮಾಡ ರಾಜಪ್ಪ ಪ್ರಕಾಶ್ ಎಂಬವರ ಹಸು ಬಲಿಯಾಗಿದೆ.
ಭಾನುವಾರ ನಸುಕಿನ ಜಾವ ೩ ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದ್ದು, ಮನೆಯ ಸಮೀಪದಲ್ಲೆ ಕಟ್ಟಿ ಹಾಕಿದ್ದ ದನಗಳ ಮೇಲೆ ಹುಲಿ ದಾಳಿ ನಡೆಸಿದೆ. ಹುಲಿಯ ಆರ್ಭಟಕ್ಕೆ ಹೆದರಿದ ದನಗಳು ಜೋರಾಗಿ ಅರಚಾಡ ತೊಡಗಿದಾಗ, ಶಬ್ದ ಕೇಳಿಸಿಕೊಂಡು, ಎಚ್ಚರಗೊಂಡ ರಾಜಪ್ಪ ಅವರು ಮನೆಯ ಹೊರಗಿನ ಲೈಟ್ ಆನ್ ಮಾಡಿ, ಹೊರಗೆ ಬರುವಷ್ಟರಲ್ಲಿ ಹುಲಿ ಕತ್ತಲಲ್ಲಿ ಮರೆಯಾಗಿದೆ. ಹೊರಗೆ ಬಂದು ನೋಡಿದಾಗ ಹುಲಿದಾಳಿಗೆ ಸಿಲುಕಿ ತಲೆಯ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದ, ಹಸು ಪ್ರಾಣವೇದನೆಯಿಂದ ನರಳಾಡುತ್ತಾ, ಕೆಲವೇ ನಿಮಿಷಗಳಲ್ಲಿ ರಾಜಪ್ಪನವರ ಕಣ್ಣೆದುರೇ ಜೀವಬಿಟ್ಟಿದೆ.
ಘಟನೆ ಬಗ್ಗೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿನೀಡಲಾಗಿದ್ದು, ಸ್ಥಳಕ್ಕೆ ಡಿ.ಆರ್.ಎಫ್.ಒ. ರಕ್ಷಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಲಿಯ ಚಲನವಲನ ವೀಕ್ಷಿಸಲು ಹಸುವಿನ ಕಳೇಬರ ಸಮೀಪ ಕ್ಯಾಮರಗಳನ್ನು ಅಳವಡಿಸಲಾಗಿದೆ. ಅರಣ್ಯ ಇಲಾಖೆ ಆದಷ್ಟು ಬೇಗ ಜಾನುವಾರು ಭಕ್ಷಕ ಹುಲಿಯನ್ನು ಹಿಡಿದು, ಆತಂಕವನ್ನು ದೂರ ಮಾಡುವಂತೆ ಹಾಗೂ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಚನ್ನನಾಯಕ