ವೀರಾಜಪೇಟೆ, ಆ. ೧೨: ಕೊಡವ ಸಮಾಜಗಳ ಒಕ್ಕೂಟದ ಸಭೆ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಾಳುಗೋಡುವಿನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ದಾಖಲೆಗಳಲ್ಲಿ “ಕೊಡಗರು” ಎಂದು ಉಲ್ಲೇಖವಾಗಿ ರುವುದನ್ನು “ಕೊಡವರು” ಎಂದು ಮಾರ್ಪಡಿಸಲು ಕಾರಣಕರ್ತರಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಪ್ರಯತ್ನವನ್ನು ಶ್ಲಾಘಿಸಲಾಯಿತು. ಅಲ್ಲದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಚಪ್ಪ, ಕೊಡವ ಜನಾಂಗದ ಪರವಾಗಿ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.
ನವೆಂಬರ್‌ನಲ್ಲಿ ಕೊಡವ ನಮ್ಮೆ: ಬಾಳುಗೋಡು ಕೊಡವ ಸಮಾಜದಲ್ಲಿ ಪ್ರತಿವರ್ಷ ನಡೆಸುವ ಕೈಲುಮೂಹೂರ್ತ ಹಬ್ಬವನ್ನು ಈ ಬಾರಿ ಸೆ.೯ ರಂದು ನಡೆಸಲು ಮತ್ತು “ಕೊಡವ ನಮ್ಮೆ”ಯನ್ನು ನ.೧೭, ೧೮ ಹಾಗೂ ೧೯ ರಂದು ಆಯೋಜಿಸಲು ಸಭೆ ನಿರ್ಧರಿಸಿತು.
ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವಾಧ್ಯಕ್ಷ ಪರದಂಡ ಸುಬ್ರಮಣಿ, ಉಪಾಧ್ಯಕ್ಷರಾದ ಮಲಚ್ಚೀರ ಬೋಸ್, ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟೀರ ಪೆಮ್ಮಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ, ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸುಮಿ ಸುಬ್ಬಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.