ಮಡಿಕೇರಿ, ಆ. ೧೨: ವಿಶಾಲ ಗದ್ದೆಯಲ್ಲಿ ಸಂಭ್ರಮದ ವಾತಾವರಣ, ವಯಸ್ಸಿನ ಮಿತಿ ಇಲ್ಲ, ಇಲ್ಲಿ ಖುಷಿಗೆ ಪಾರವೇ ಇಲ್ಲ. ಕೆಸರಿನ ನಡುವೆ ಹಗ್ಗ ಹಿಡಿದು ಜಗ್ಗಾಟ, ವಾಲಿಬಾಲ್‌ನ ಕೌತುಕ, ಎದ್ದು ಬಿದ್ದು ಓಡುತ್ತಿರುವ ಓಟಗಾರರು, ಕೆಸರಿನೋಕುಳಿಯಲ್ಲಿ ಮಿಂದೆದ್ದ ಕ್ರೀಡಾಪಟುಗಳು..!

ಹೌದು..ಇಂದು ಕಗ್ಗೋಡ್ಲಿನಲ್ಲಿ ನಡೆದ ಕೆಸರುಗದ್ದೆ ಕ್ರೀಡಾ ಕಲರವ ಜನಮನ ಸೆಳೆಯಿತು. ವಿವಿಧ ಆಟೋಟಗಳು ಸಂಭ್ರಮ ಮೂಡಿಸು ವುದರ ಜೊತೆಗೆ ಕುತೂಹಲವನ್ನು ಸೃಷ್ಟಿಸಿತು.

ಜಿಲ್ಲಾ ಪಂಚಾಯಿತಿ, ಯುವಸ ಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ೩೧ನೇ ವರ್ಷದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಬೆಳಿಗ್ಗಿನಿಂದಲೇ ವಿವಿಧ ಕಡೆಗಳಿಂದ ಆಗಮಿಸಿದ ಕ್ರೀಡಾ ಪಟುಗಳು ಆಟೋಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹೆಚ್ಚಾಗಿ ಕೊಡಗಿನ ವಿದ್ಯಾರ್ಥಿಗಳ ತಂಡ ಪಂದ್ಯಾಟದಲ್ಲಿ ಭಾಗವಹಿಸಿತ್ತು. ಜೊತೆಗೆ ಹಾಸನ, ಉಡುಪಿ, ಮಂಗಳೂರು ಹಾಗೂ ಮೈಸೂರು ಜಿಲ್ಲೆಯ ಸ್ಪರ್ಧಿಗಳು ಪಾಲ್ಗೊಂಡು ವಿನೂತನ ಅನುಭವ ಪಡೆದು ಕೊಂಡರು.

ಕೆಸರಿನೋಕುಳಿಯಲ್ಲಿ ಸಂಭ್ರಮ

ಮೊಬೈಲ್ ಗೇಮ್ಸ್ಗಳ ಪ್ರಭಾವದಿಂದ ಸಾಂಪ್ರದಾಯಿಕ ಆಟಗಳಿಂದ ದೂರವಿದ್ದ ಮಕ್ಕಳು ಕೆಸರಿನ ನಡುವೆ ಆಟವಾಡಿ ಸಂತೋಷ ಅನುಭವಿಸಿದರು.

ಓಟ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಕ್ರೀಡೆಗಳು ಮನರಂಜಿಸಿದವು. ನಾಟಿಗೂ ಮುನ್ನ ಕೆಸರಿನಿಂದ ಕೂಡಿದ್ದ ಭತ್ತದ ಗದ್ದೆಯಲ್ಲಿ ಮಿಂದೇಳುತ್ತ ಆಟ ಗಾರರು ಆನಂದಿಸಿದರು. ಮಹಿಳೆ ಯರ ಹಗ್ಗಜಗ್ಗಾಟ, ಥ್ರೋಬಾಲ್ ಅತ್ಯಂತ ಕುತೂಹಲ ಮೂಡಿಸಿತು. ಹಗ್ಗಜಗ್ಗಾಟದಲ್ಲಿ ಪುರುಷರು

ಶಕ್ತಿ ಪ್ರದರ್ಶನ ಮಾಡಿದರೆ, ವಾಲಿಬಾಲ್ ಆಟ ಪ್ರೇಕ್ಷಕರ ಗಮನ ಸೆಳೆಯಿತು.

(ಮೊದಲ ಪುಟದಿಂದ) ಶಾಲಾ ಬಾಲಕಿಯರಿಗೆ ಥ್ರೋಬಾಲ್, ಬಾಲಕರಿಗೆ ಹಗ್ಗಜಗ್ಗಾಟ, ವಿವಿಧ ವಯೋಮಾನದವರಿಗೆ ಓಟ, ಪುರುಷರ ಹಗ್ಗಜಗ್ಗಾಟ ರೋಮಾಂಚನಗೊಳಿಸಿತು.

ದAಪತಿ ಓಟ ವಿಶೇಷ

ಈ ಬಾರಿ ದಂಪತಿ ಓಟ ಕ್ರೀಡಾಕೂಟದ ಆಕರ್ಷಣೆಯಲ್ಲಿ ಒಂದಾಗಿತ್ತು. ಸತಿ-ಪತಿಗಳು ಕೈಹಿಡಿದುಕೊಂಡು ಗದ್ದೆಯಲ್ಲಿ ಎದ್ದುಬಿದ್ದು ಓಡಿ ಗಮನಸೆಳೆದರು.

ಜಿಲ್ಲೆಯ ವಿವಿಧೆಡೆ ಕ್ರೀಡಾಸಕ್ತರು ಉತ್ಸಾಹದಿಂದ ಪಾಲ್ಗೊಂಡು ಪಂದ್ಯಾಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಸಂಜೆಯ ತನಕ ಯುವಕ-ಯುವತಿಯರು ಗದ್ದೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಮಡಿಕೇರಿ-ವೀರಾಜಪೇಟೆ ನಡುವಿನ ರಸ್ತೆಯಲ್ಲಿ ಗದ್ದೆ ಇರುವ ಹಿನ್ನೆಲೆ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಕೂಡ ವಾಹನ ನಿಲ್ಲಿಸಿ ಆಟೋಟಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಕಂಡುಬAತು.

ಬಾರದ ಮಳೆ

ಪ್ರತಿವರ್ಷ ಬಿರುಸಿನ ಮಳೆಯೊಂದಿಗೆ ಕ್ರೀಡಾಕೂಟ ನಡೆಯುತ್ತಿತ್ತು. ಈ ವರ್ಷ ಮಳೆಯ ಸಿಂಚನ ಇಲ್ಲದಿರುವುದು ಕ್ರೀಡಾಪಟುಗಳ ನಿರಾಸೆಗೂ ಕಾರಣವಾಯಿತು.

ಮಳೆ ಇದ್ದರೆ ಗದ್ದೆ ಹದವಾಗಿರುತ್ತದೆ. ಇದು ಚಟುವಟಿಕೆಗೆ ಪೂರಕ ಕೂಡ. ಮಳೆಗೆ ಮೈಯೊಡ್ಡಿ ಆಟವಾಡುವುದು ಕ್ರೀಡಾಪಟುಗಳಿಗೂ ಇಷ್ಟವಾಗುತ್ತದೆ. ಮಧ್ಯಾಹ್ನ ಕೆಲಹೊತ್ತು ಮಳೆ ಮೆಲ್ಲನೆ ಬಂತು. ನಂತರ ಸಿಂಚನ ನಿಲ್ಲಿಸಿತು.

ವರದಿ : ಹೆಚ್.ಜೆ. ರಾಕೇಶ್, ಚಿತ್ರ : ಲಕ್ಷಿö್ಮÃಶ್

ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ - ಸುಜಾ ಕುಶಾಲಪ್ಪ

ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ ಎಂದು ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.

ಕೆಸರುಗದ್ದೆ ಕ್ರೀಡಾಕೂಡವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ನಿರಂತರ ಕ್ರೀಡಾಕೂಟಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿಸಿ ಮಾನಸಿಕವಾಗಿಯೂ ಸದೃಢತೆ ಸಾಧಿಸಬಹುದು. ದಿನದ ಕೆಲಘಂಟೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಾಗಿರುವಂತೆ ಕರೆ ನೀಡಿದ ಅವರು, ಗದ್ದೆ ಕೆಲಸ ಮುಗಿದ ಬಳಿಕ ನಾಟಿ ಓಟದಂತ ಮನೋರಂಜನ ಚಟುವಟಿಕೆಗಳನ್ನು ನಡೆಸಲಾಗುತಿತ್ತು. ಇದೀಗ ನಾಟಿಗೂ ಮುನ್ನ ಕ್ರೀಡಾಕೂಟಗಳನ್ನು ನಡೆಸಿ ಯುವಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗುತ್ತಿದೆ. ಓಟದೊಂದಿಗೆ ಇನ್ನಿತರ ಕ್ರೀಡೆಗಳನ್ನು ಸೇರಿಸಿ ಕ್ರೀಡಾಪಟುಗಳಿಗೆ ಹೊಸ ಅನುಭವ ನೀಡುತ್ತಿರುವುದು ಶ್ಲಾಘನೀಯ. ಆಟದಲ್ಲಿ ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದರು.

ಜಿಲ್ಲಾ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಮಾಳಿಗೆ ಮನೆ ವೆಂಕಟೇಶ್ ಮಾತನಾಡಿ, ಒಕ್ಕೂಟದ ಭವನವನ್ನು ೬ ತಿಂಗಳಿಗೆAದು ಕಾಲೇಜು ನಡೆಸುವ ಉದ್ದೇಶದಿಂದ ಪಡೆದು ೧೦ ವರ್ಷ ಕಳೆದರೂ ನಮ್ಮ ಸುಪರ್ದಿಗೆ ಕಟ್ಟಡ ನೀಡಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಪೊನ್ನಚ್ಚನ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ನೆಹರು ಯುವಕೇಂದ್ರ ಯುವಜನ ಸಮನ್ವಯಾಧಿಕಾರಿ ಕೆ.ಟಿ. ಉಲ್ಲಾಸ್, ಹಾಕತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೀತಾಂಜಲಿ, ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಬಾಳಾಡಿ ದೀಲಿಪ್ ಹಾಜರಿದ್ದರು.

ಹಾಕತ್ತೂರು ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮಡಿಕೇರಿ ತಾಲೂಕು ಯುವ ಒಕ್ಕೂಟ ಮಾಜಿ ಅಧ್ಯಕ್ಷ ನವೀನ್ ದೇರಳ ಸ್ವಾಗತಿಸಿ, ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ ವಂದಿಸಿದರು.