ಸಿದ್ದಾಪುರ, ಆ. ೧೧: ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಕೊಲೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೆಲ್ಲಿಹುದಿಕೇರಿಯ ಬೆಟ್ಟದ ಕಾಡು ನಿವಾಸಿ, ಕ್ರಿಸ್ಟಲ್ (೨೬) ಮೃತ ದುರ್ದೈವಿಯಾಗಿದ್ದು, ರಾಜು ಮತ್ತು ರವಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈರ್ವರು ತಲೆಮರೆಸಿಕೊಂಡಿದ್ದಾರೆ.
ಹಳೇ ವೈಷಮ್ಯದಿಂದ ಯುವಕನೋರ್ವನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ಈರ್ವರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡು ನಿವಾಸಿಯಾಗಿರುವ ಕ್ರಿಸ್ಟಲ್, ಸಾಜು, ಜಾನಿ ಹಾಗೂ ಸಿದ್ದಾಪುರದ ಮಡಿಕೇರಿ ರಸ್ತೆಯ ಹಂದಿ ಮಾಂಸ ಮಾರಾಟ ಮಾಡುವ ರಾಜು ಮತ್ತು ಎಂ.ಜಿ. ರಸ್ತೆಯ ರವಿ ಗುಂಪಿನ ನಡುವೆ ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಮದ್ಯದ ಅಂಗಡಿಯಲ್ಲಿ ಕಲಹ ಏರ್ಪಟ್ಟಿದೆ.
ಈ ವಿಚಾರವನ್ನು ಯಾರೋ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ ಮೇರೆಗೆ ಸಿದ್ದಾಪುರ ಪೊಲೀಸರು ಬಾರ್‌ಗೆ ತೆರಳಿ ಸಾಜು ಮತ್ತು ಜಾನಿ ಇಬ್ಬರನ್ನು ಠಾಣೆಗೆ ಕರೆತಂದರು.
(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಕ್ರಿಸ್ಟಲ್ ಅಲ್ಲಿಂದ ತಪ್ಪಿಸಿಕೊಂಡಿದ್ದು, ಈತನನ್ನು ಹಳೇ ದ್ವೇಷದಿಂದ ಹಂದಿ ಮಾಸ ವ್ಯಾಪಾರಿ ರಂಜು ಮತ್ತು ರವಿ ಸೇರಿ ರಾತ್ರಿ ಸಮಯದಲ್ಲಿ ಕೊಲೆ ಮಾಡಿದ್ದಾರೆಂದು ಮೃತ ಕ್ರಿಸ್ಟಲ್‌ನ ತಾಯಿ ರೋಸಿ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ.
ಕ್ರಿಸ್ಟಲ್‌ನ ಮೃತದೇಹವು ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬದಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆ ಆಗಿದೆ. ಮೃತದೇಹದ ಕತ್ತಿನ ಹಿಂಭಾಗ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟಿರುವ ಕ್ರಿಸ್ಟಲ್ ತಾಯಿ ನೀಡಿರುವ ಪುಕಾರಿನ ಮೇರೆಗೆ ರಂಜು ಮತ್ತು ರವಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಯಿತು. ಘಟನೆಯ ಮಡಿಕೇರಿ ವಿಭಾಗದ ಡಿವೈಎಸ್‌ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಮರೋಣತ್ತರ ಪರೀಕ್ಷೆ ನಡೆಯಿತು.