ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ
ನವದೆಹಲಿ, ಆ. ೧೧: ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲೆ ಶೇಕಡಾ ೨೮ ರಷ್ಟು ತೆರಿಗೆ ವಿಧಿಸಲು ಕೇಂದ್ರಿಯ ಮತ್ತು ಸಮಗ್ರ ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆ ಅಂಗೀಕರಿಸಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ ಜಿಎಸ್‌ಟಿ ಮಸೂದೆ ಮಂಡಿಸಿದರು. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ ೨೦೨೩ ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, ೨೦೨೩ ಅನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಮೇಲಿನ ತೆರಿಗೆ ಕುರಿತು ಸ್ಪಷ್ಟತೆ ನೀಡಲು, ೨೦೧೭ ರ ಸಿಜಿಎಸ್‌ಟಿ ಕಾಯಿದೆಯ ಶೆಡ್ಯೂಲ್ ೩ ರಲ್ಲಿನ ನಿಬಂಧನೆಗಳಿಗೆ ತಿದ್ದುಪಡಿ ತರಲಾಗಿದೆ.
ಚುನಾವಣಾ ಆಯೋಗದ ಹಿಡಿತದಲ್ಲಿಡುವ ಪ್ರಯತ್ನ-ಕಾಂಗ್ರೆಸ್
ನವದೆಹಲಿ, ಆ. ೧೧: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು (ಸಿಜೆಐ) ಹೊರಗೆ ಇರಿಸುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಗುರುವಾರ ಮಂಡಿಸಿದೆ. ಸಿಜೆಐ ಬದಲಿಗೆ ಸಂಪುಟ ದರ್ಜೆಯ ಸಚಿವರೊಬ್ಬರು ಸಮಿತಿಯ ಸದಸ್ಯರಾಗಲಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ನೇಮಕಾತಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯುತ್ತದೆ ಎನ್ನಲಾಗಿದೆ.
ಹಣ ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ
ಬೆಂಗಳೂರು, ಆ. ೧೧: ರಾಜ್ಯ ಸರ್ಕಾರದ ವಿರುದ್ಧ ಯಾರೂ ಕಮಿಷನ್ ಆರೋಪವನ್ನು ಮಾಡಿಲ್ಲ ಎಂದು ಹೇಳಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಆಗಸ್ಟ್ ೩೧ರೊಳಗೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಕೋಟಿ ಕೋಟಿ ರೂಪಾಯಿ ಗಳನ್ನು ಬ್ಯಾಂಕ್, ಖಾಸಗಿ ಮತ್ತಿತರ ಮೂಲಗಳಿಂದ ಸಾಲ ತಂದು ಕಾಮಗಾರಿಗಳನ್ನು ಮುಗಿಸಲಾಗಿರುತ್ತದೆ. ಹಲವಾರು ಪ್ರಕರಣಗಳಲ್ಲಿ ಮನೆ, ಚಿನ್ನ ನಿವೇಶನಗಳ ಪತ್ರಗಳನ್ನು ಅಡವಿಟ್ಟು ಸಾಲ ಮಾಡಲಾಗಿರುತ್ತದೆ ಎಂದರು.
ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅಮಾನತ್ತು
ನವದೆಹಲಿ, ಆ. ೧೧: "ನಿಯಮ ಉಲ್ಲಂಘನೆ, ದುರ್ನಡತೆ, ಧಿಕ್ಕರಿಸುವ ವರ್ತನೆ"ಗಾಗಿ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಶುಕ್ರವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದ್ದು, ವಿಶೇಷಾಧಿಕಾರ ಸಮಿತಿಯ ವರದಿ ಬಾಕಿ ಇದೆ. ದೆಹಲಿ ರಾಷ್ಟç ರಾಜಧಾನಿ ಪ್ರದೇಶ ಸರ್ಕಾರ(ತಿದ್ದುಪಡಿ)ದ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಮೇಲ್ಮನೆಯ ನಾಲ್ವರು ಸದಸ್ಯರ ಹೆಸರನ್ನು ಸೇರಿಸಿದ್ದಕ್ಕಾಗಿ ಎಎಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸದನದ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಅನುಸರಿಸಿ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ. ಧ್ವನಿ ಮತದ ಮೂಲಕ ಈ ಪ್ರಸ್ತಾವವನ್ನು ಅಂಗೀಕರಿಸಲಾಯಿತು. ದೆಹಲಿ ಸೇವಾ ಮಸೂದೆಗೆ ಸಂಬAಧಿಸಿದ ಪ್ರಸ್ತಾವನೆಯಲ್ಲಿ ಐವರು ಸಂಸದರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಎಪಿ ನಾಯಕ ರಾಘವ್ ಚಡ್ಡಾ, ಕೇಸರಿ ಪಕ್ಷ ತಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದರು.
ಅಕ್ರಮವಾಗಿ ತಂಗಿದ್ದ ಬಾಂಗ್ಲಾದೇಶಿ ಪ್ರಜೆಗಳು
ಬೆಂಗಳೂರು, ಆ. ೧೧: ರಾಷ್ಟಿçÃಯ ತನಿಖಾ ದಳ (ಎನ್‌ಐಎ) ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬೆಂಗಳೂರಿನಲ್ಲಿ ಅಕ್ರಮವಾಗಿ ತಂಗಿದ್ದ ೨೪ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿದ್ದು, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಬೆಳ್ಳಂದೂರಿನಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮೂವರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಲಾಗಿದೆ. ಪ್ರಸ್ತುತ ಬೆಳ್ಳಂದೂರು ಪೊಲೀಸರ ವಶದಲ್ಲಿರುವ ವಲಸಿಗರು ೨೦೧೧ ರಿಂದ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವಲಸಿಗರು ೨೦,೦೦೦ ರೂಪಾಯಿ ಕೊಟ್ಟು ಮಧ್ಯವರ್ತಿಗಳ ಸಹಾಯದಿಂದ ದೇಶ ಪ್ರವೇಶಿಸಿದ್ದಾರೆ. ಅಲ್ಲದೇ ಅಕ್ರಮ ವಲಸಿಗರು ಆಧಾರ್ ಕಾರ್ಡ್ಗಳು, ಪಡಿತರ ಚೀಟಿಗಳು ಮತ್ತು ಇತರ ಸರ್ಕಾರಿ ಗುರುತಿನ ಚೀಟಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬAಧ ಸ್ಥಳೀಯ ಪೊಲೀಸರು ವಿದೇಶಿಯರ ಕಾಯ್ದೆ ಸೆಕ್ಷನ್ ೧೪ (ಸಿ), ೧೪ (ಎ) ಮತ್ತು ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪಾಕಿಸ್ತಾನದ ನಸುಳುಕೋರನ ಹತ್ಯೆ
ಪಂಜಾಬ್, ಆ. ೧೧: ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಅಂರ‍್ರಾಷ್ಟಿçÃಯ ಗಡಿಯಲ್ಲಿ ಶುಕ್ರವಾರ ಪಾಕಿಸ್ತಾನದ ನಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತರ್ನ್ ತರನ್ ಜಿಲ್ಲೆಯ ತೆಕಲನ್ ಗ್ರಾಮದ ಐಬಿ ಬಳಿ ಅನುಮಾನಾಸ್ಪದ ವ್ಯಕ್ತಿಯ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಪಡೆಗಳು, ಆತನಿಗೆ ಗುಂಡಿಕ್ಕಿ ಸ್ಥಳದಲ್ಲಿಯೇ ಹತ್ಯೆ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.