ವೀರಾಜಪೇಟೆ, ಆ. ೧೦: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಸರಕಾರ ಆದಿವಾಸಿಗಳಿಗೆಂದು ಮೀಸಲಿಟ್ಟಿದ್ದ ಪೈಸಾರಿ ಜಾಗಕ್ಕೆ ಖಾಸಗಿ ಕಂಪೆನಿ ಬೇಲಿ ಹಾಕುತ್ತಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಆದಿವಾಸಿ ಸಂಘರ್ಷ ಮೋರ್ಚಾ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿತು. ಈ ಸಂದರ್ಭ ಸಂಘಟನೆಯ ಮುಖಂಡ ಎಂ.ಕೆ. ಮೋಹನ್ ಮಾತನಾಡಿ, ಮಣಿಪುರ ದಲ್ಲಿ ಬುಡಕಟ್ಟು ಆದಿವಾಸಿಗಳ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸಲು, ಆದಿವಾಸಿಗಳನ್ನು ರಕ್ಷಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ದೂರಿದರು. ಬಾರಿಕಾಡುವಿನಲ್ಲಿ ಸರಕಾರ ಆದಿವಾಸಿ ಬಡ ಕಾರ್ಮಿಕರಿಗೆಂದು ಮನೆ ನಿರ್ಮಾಣ ಮಾಡಲು ಕಾಯ್ದಿರಿಸಿದ್ದ ಜಾಗದಲ್ಲಿ ಉಳ್ಳವರೆ ಜಾಗವನ್ನು ಕಬಳಿಸುತ್ತಿರುವುದು ಸರಿಯಲ್ಲ, ಕಳೆದ ಆರು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದೇವೆ. ಆದರೂ ಸಮಸ್ಯೆಗಳು ಬಗೆಹರಿದಿಲ್ಲ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆದಿವಾಸಿ ಸಂಘರ್ಷ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಗೌರಿ ಮಾತನಾಡಿ, ಬಾರಿಕಾಡುವಿನಲ್ಲಿ ಸರಕಾರ ಈಗಾಗಲೇ ಕೆಲವು ಮನೆಗಳನ್ನು ನಿರ್ಮಾಣ ಮಾಡಿದ್ದರೂ ನಿವಾಸಿಗಳಿಗೆ ಶೌಚಾಲಯಗಳಿಲ್ಲ, ಸೋಲಾರ್ ದೀಪ ಮತ್ತು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ವಕೀಲರಾದ ಮೈತ್ರೀ, ವೀರಾಜಪೇಟೆ ತಾಲೂಕು ಸಂಘಟನೆಯ ರವಿ, ಸುಬ್ಬ, ಮುತ್ತ, ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಮಾತನಾಡಿ, ಈ ಸಂಬAಧ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೂ ಮೊದಲು ಪ್ರತಿಭಟನಕಾರರು ತಾಲೂಕು ಮೈದಾನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.