ಮಡಿಕೇರಿ, ಆ. ೧೦: ಸದಾ ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠ ಪ್ರವಚನ ಕೇಳುವ ಒತ್ತಡದಲ್ಲಿರುತ್ತಿದ್ದ ಪುಟ್ಟ ಮಕ್ಕಳು ಭತ್ತದ ಗದ್ದೆಯಲ್ಲಿ ಸಂಭ್ರಮಿಸಿದರು.

ಕಿರಿಯ ವಯಸ್ಸಿನ ಈ ಮಕ್ಕಳಿಗೆ ಮೊದಲ ಬಾರಿ ಕೆಸರಿನ ಗದ್ದೆಗೆ ಇಳಿದಿದ್ದು ವಿಶೇಷ ಅನುಭವ ಮೂಡಿಸಿತ್ತು. ಕೇವಲ ಆಟಕ್ಕಾಗಿ ಇವರನ್ನು ಗದ್ದೆಗೆ ಇಳಿಸಲಾಗಿರಲಿಲ್ಲ ಜತೆಗೆ ಚಿಕ್ಕವಯಸ್ಸಿನಲ್ಲೇ ಕೃಷಿಯತ್ತ ಆಸಕ್ತಿ ಮೂಡಿಸುವ ಪಾಠವನ್ನು ಹೇಳಿಕೊಡಲಾಯಿತು.

ಮಕ್ಕಳಲ್ಲಿ ಕೃಷಿ ಅನುಭವ ಮೂಡಿಸುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಗ್ಗೋಡ್ಲುವಿನ ಪ್ರಗತಿಪರ ಕೃಷಿಕ ಮಂದ್ರಿರ ತೇಜಸ್ ನಾಣಯ್ಯ ಅವರ ಗದ್ದೆಯಲ್ಲಿ ಅಗೆ ಮತ್ತು ನಾಟಿ ನೆಡುವುದರ ಬಗ್ಗೆ ತರಬೇತಿ ನೀಡಲಾಯಿತು. ಮಡಿಕೇರಿಯ ಲಿಟ್ಲ್ ಫ್ಲವರ್ ಆಂಗ್ಲ ಶಾಲೆಯ ಪುಟ್ಟ ಮಕ್ಕಳು ಇದರಲ್ಲಿ ಭಾಗಿಗಳಾಗಿದ್ದರು. ಮಕ್ಕಳು ತಮ್ಮದೇ ಚಿಂತನೆಯ ಪ್ರಶ್ನೆಗಳ ಮೂಲಕ ಅನುಭವಸ್ತರಿಂದ ಮಾಹಿತಿಯನ್ನೂ ಪಡೆದರು. ಬಳಿಕ ತೇಜಸ್ ಅವರ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಮಾಡಿಸುವುದರೊಂದಿಗೆ ಮೀನು, ಬಾತುಕೋಳಿಗಳಿಗೆ ಆಹಾರವನ್ನೂ ನೀಡುವ ಮೂಲಕ ಅವುಗಳ ಜೀವನ ಕ್ರಮವನ್ನೂ ಪರಿಚಯಿಸಲಾಯಿತು.

ಕಾರ್ಯಕ್ರಮದಲ್ಲಿ ದಾನಿಗಳಾದ ಬಳಪದ ರೋಷನ್ ಮಂದಣ್ಣ, ಕೊಡಂದಿರ ಪೊನ್ನಣ್ಣ, ತುಮ್ತಜಿರ ದಯಾನಂದ್, ಕುಂಜಿಲನ ಮೋಹನ್ ಸೇರಿದಂತೆ ಗೌಡ ಯುವ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು, ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.