ವಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟ : ಪ್ರಧಾನಿ ಮೋದಿ

ನವದೆಹಲಿ, ಆ. ೧೦: ದೇಶದ ಜನರು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಅವರು, ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಎನ್‌ಡಿಎ ಮತ್ತು ಬಿಜೆಪಿಯನ್ನು ಮಹಾ ವಿಜಯದ ಮೂಲಕ ಮರಳಿ ಅಧಿಕಾರಕ್ಕೆ ತರಲು ನೀವು (ವಿರೋಧ ಪಕ್ಷಗಳು) ನಿರ್ಧರಿಸಿರುವುದನ್ನು ನಾನು ಇಂದು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಒಂದು ರೀತಿಯಲ್ಲಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವು ಯಾವಾಗಲೂ ನಮಗೆ ಅದೃಷ್ಟವಾಗಿದೆ. ಇಂದು ನೀವು (ವಿರೋಧ ಪಕ್ಷಗಳು) ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಅಭೂತಪೂರ್ವ ಜಯದೊಂದಿಗೆ ಮರಳಿ ಬರಲು ನಿರ್ಧರಿಸಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗೃಹ ಸಚಿವರ ವಿರುದ್ಧ ಹಕ್ಕುಚ್ಯುತಿ ನೋಟೀಸ್

ನವದೆಹಲಿ, ಆ. ೧೦: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸಂಸದರು ಗುರುವಾರ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ. ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕಂ ಟ್ಯಾಗೋರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದು, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ೨೦೦೮ರಲ್ಲಿ ಮಹಾರಾಷ್ಟçದಲ್ಲಿ ಕೃಷಿಕ ಮಹಿಳೆ ಕಲಾವತಿ ಬಂಡೂರಕರ್ ಅವರನ್ನು ಭೇಟಿ ಮಾಡಿದ್ದರು. ಈ ಕುರಿತು ವಿವರಿಸುವಾಗ ಸಚಿವ ಶಾ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಹಕ್ಕುಚ್ಯುತಿ ನೋಟಿಸ್ ನೀಡಿದೆ.

ಮಣಿಪುರ-ಮಹಿಳೆ ಮೇಲೆ ಅತ್ಯಾಚಾರ ಆರೋಪ

ಇಂಫಾಲ್, ಆ. ೧೦: ಮಣಿಪುರದ ಚುರಚಂದ್‌ಪುರದಲ್ಲಿ ಮೇ ೩ರಂದು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿ ಮೈತೇಯಿ ಸಮುದಾಯದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬAಧ ಬಿಷ್ಣುಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಮೇ ೩ರಂದು ಹಲವರು ಚುರಚಂದ್‌ಪುರದಲ್ಲಿ ಮನೆಗಳನ್ನು ತೊರೆದು ಓಡಿ ಹೊಗುತ್ತಿದ್ದೆವು. ಈ ವೇಳೆ ಕುಕಿ ಸಮುದಾಯಕ್ಕೆ ಸೇರಿದ ಅಪರಿಚಿತ ದುಷ್ಕರ್ಮಿಗಳು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮೈತೇಯಿ ಸಮುದಾಯದ ಮಹಿಳೆಯೊಬ್ಬರು ದೂರು ನೀಡಿದ್ದರು. ಮೀಸಲಾತಿ ವಿಚಾರಕ್ಕೆ ಸಂಬAಧಿಸಿದAತೆ ಕುಕಿ ಹಾಗೂ ಮೈತೇಯಿ ಸಮುದಾಯದವರ ನಡುವೆ ಮಣಿಪುರದಲ್ಲಿ ಮೇ ೩ರಿಂದ ಹಿಂಸಾಚಾರ ನಡೆಯುತ್ತಿದೆ. ಈವರೆಗೆ ೧೫೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ವಸತಿ ಕಳೆದುಕೊಂಡಿದ್ದಾರೆ.

ಸಿಜೆಐ ಹೊರಗಿಡುವ ಮಸೂದೆ ಮಂಡನೆಗೆ ಕೇಂದ್ರ ಮುಂದು

ನವದೆಹಲಿ, ಆ. ೧೦: ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ. ಪ್ರಸ್ತಾಪಿತ ಹೊಸ ಮಸೂದೆಯ ಅನ್ವಯ ಪ್ರಧಾನ ಮಂತ್ರಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವರು ಇರುವ ಸಮಿತಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ.

ಸುಪ್ರೀಂಕೋರ್ಟ್ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ

ನವದೆಹಲಿ, ಆ. ೧೦: ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಪ್ರವೇಶಿಸಲು ಇ-ಪಾಸ್ ಪಡೆಯಲು ಇನ್ನೂ ಸರದಿಯಲ್ಲಿ ನಿಲ್ಲಬೇಕಿಲ್ಲ, ಇದಕ್ಕೆ ಅನುವು ಮಾಡಿಕೊಡಲು ‘ಸುಸ್ವಾಗತಂ' ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಸಿಜೆಐ ಚಂದ್ರಚೂಡ್ ಈ ಆನ್‌ಲೈನ್ ಸೌಲಭ್ಯದ ಬಗ್ಗೆ ಪ್ರಕಟಿಸಿದ್ದಾರೆ. ಇದರ ಮೂಲಕ ವಕೀಲರು, ಸಂದರ್ಶಕರು, ಮತ್ತಿತರರು ಇತರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇ-ಪಾಸ್ ಪಡೆಯಬಹುದಾಗಿದೆ. ‘ಸುಸ್ವಾಗತಂ' ವೆಬ್ ಆಧಾರಿತ ಮತ್ತು ಮೊಬೈಲ್ ಸ್ನೇಹಿ ಆಪ್ ಆಗಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಲು, ವಕೀಲರನ್ನು ಭೇಟಿ ಮಾಡುವಂತಹ ವಿವಿಧ ಉದ್ದೇಶಗಳಿಗೆ ಬಳಕೆದಾರರು ಆನ್‌ಲೈನ್‌ನಲ್ಲಿ ನೋಂದಣಿಯಾಗಲು ಮತ್ತು ಇ- ಪಾಸ್ ಪಡೆಯಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ.