ಸಂಪಾಜೆ, ಆ. ೯: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲೂಕು ಘಟಕ, ಸಂಪಾಜೆ ಹೋಬಳಿ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಗೃಹಲಕ್ಷಿö್ಮ ಯೋಜನೆಗೆ ಅರ್ಜಿ ಸಲ್ಲಿಸಲು ತೆರಳಿದಾಗ ಮನೆ ತೆರಿಗೆ, ನೀರಿನ ತೆರಿಗೆ ಪಾವತಿ ಮಾಡದೇ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬಿಲ್ ಕಲೆಕ್ಟರ್ ಅನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.

ಸಂಪಾಜೆ ಗೇಟ್ ಬಳಿಯಿಂದ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಆವರಣ ತಲುಪಿ ಪ್ರತಿಭಟಿಸಲಾಯಿತು. ನಂತರ ಮಾತಾನಾಡಿದ ಜಿಲ್ಲಾ ಅಧ್ಯಕ್ಷ ದಿವಾಕರ್ ಹೆಚ್.ಎಲ್., ದಲಿತರನ್ನು ಕಡೆಗಣಿಸುವ ಪ್ರಕರಣಗಳು ಕೊಡಗು ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಕಂಡು ಬರುತ್ತಿದ್ದು, ಇದು ಮುಂದುವರಿದರೆ ಎಲ್ಲಾ ಕಡೆ ಪ್ರತಿಭಟಿಸಬೇಕಾಗುತ್ತದೆ.

ಸಂಪಾಜೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಅಮಾನತು ಮಾಡದಿದ್ದಲ್ಲಿ ತಾ. ೧೪ ರ ಮಧ್ಯರಾತ್ರಿ ಮಡಿಕೇರಿ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್ ಪೊನ್ನಪ್ಪ, ಸಂಪಾಜೆ ಹೋಬಳಿ ಅಧ್ಯಕ್ಷ ಶಶಿಕುಮಾರ್ ಹೆಚ್.ಬಿ., ಉಪಾಧ್ಯಕ್ಷ ಸುಂದರ ಹೆಚ್.ಬಿ. ಹಾಗೂ ಸದಸ್ಯರು ಭಾಗವಹಿಸಿದ್ದರು.