ಗಾಳಿಬೀಡು, ಆ. ೯: ಕೊಡಗು ಜಿಲ್ಲೆಯ ಗಾಳಿಬೀಡಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ತಾ. ೭ ರಂದು ಪರಮಾಣು ಜ್ಯೋತಿ ಕಾರ್ಯಕ್ರಮವು ಜರುಗಿತು. ಇದರ ಅಂಗವಾಗಿ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಾರ್ಕ್) ಮುಂಬಯಿ ಇಲ್ಲಿಂದ ಬಂದ ಪರಮಾಣು ವಿಜ್ಞಾನಿಗಳಾದ ಜಸರಾಜ್ ವೈಷ್ಣವ ಮತ್ತು ಊರ್ವಶಿ ಕರ್ನಾಣಿ ಗೋರ್ ಇವರುಗಳು ವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಆಗಮಿಸಿದ್ದ ಅತಿಥಿಗಳು ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.

ತಾ. ೬ ರಂದು ಆಗಮಿಸಿದ್ದ ವಿಜ್ಞಾನಿಗಳು ತಾ. ೭ ರಂದು ದಿನವಿಡೀ ವಿವಿಧ ತರ ಗತಿಯ ವಿದ್ಯಾರ್ಥಿಗಳ ಜೊತೆ ನೇರ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಮೂಲವಿಜ್ಞಾನದಲ್ಲಿ, ವಿಶೇಷವಾಗಿ ಪರಮಾಣು ವಿಜ್ಞಾನದ ಕುರಿತು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಹಾಗೂ ವಿಜ್ಞಾನ ಶಿಕ್ಷಕರು ಹಾಜರಿದ್ದರು. ಆಗಮಿಸಿದ್ದ ಅತಿಥಿಗಳು ವಿದ್ಯಾಲಯದ ಚಟುವಟಿಕೆಗಳನ್ನು ವೀಕ್ಷಿಸಿದರು. ಸಾಯಂಕಾಲ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.