ಗೋಣಿಕೊಪ್ಪಲು, ಆ. ೯: ಬುಡಕಟ್ಟು ಕೃಷಿಕರ ಸಂಘದ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ನೂತನ ಅಧ್ಯಕ್ಷರಾಗಿ ತಿತಿಮತಿ ಲ್ಯಾಂಪ್ಸ್ ಸಂಘದ ನಿರ್ದೇಶಕ, ಚೆನ್ನಂಗಿಯ ಪಿ.ಕೆ. ಸಿದ್ದಪ್ಪ ಆಯ್ಕೆಯಾಗಿದ್ದಾರೆ.
ತಿತಿಮತಿ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಬುಡಕಟ್ಟು ಕೃಷಿಕರ ಸಂಘದ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಗಿರಿಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ಮುಂದಿನ ಹೋರಾಟ ಹಾಗೂ ಇನ್ನಿತರ ವಿಷಯಗಳ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸಂಬAಧ ಸಮುದಾಯ ಭಾಂದವರು ಸಿದ್ದಪ್ಪರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ಬುಡಕಟ್ಟು ಕೃಷಿಕರ ಸಂಘದ ಉಪಾಧ್ಯಕ್ಷರಾಗಿ ಜೆ.ಎಸ್. ಸೋಮಯ್ಯ, ಕಾರ್ಯದರ್ಶಿಯಾಗಿ ಬಿ.ಸಿ. ಪಾಪು, ಖಜಾಂಚಿಯಾಗಿ ಪುಷ್ಪ ನೇಮಕಗೊಂಡರು. ಪಿ. ಕಾಳ, ಉಮೇಶ್, ಪಿ.ಆರ್. ಪಂಕಜ, ಪಿ.ಜೆ. ಮಲ್ಲಪ್ಪ ಪಿ.ಯಂ. ಸುಬ್ರು, ಚಂದ್ರ, ಪಿ.ಸಿ. ರಾಮು, ರಾಜು, ಮಣಿಕುಂಞ, ರವಿನಾ, ಉದಯ, ಜೆ,ಕೆ. ರಮೇಶ, ಬೋಜಪ್ಪ, ಸತೀಸ, ಶಾಂತಮ್ಮ, ಶಾಂತ ಪಿ.ಸಿ, ರಮೇಶ, ಕಾಳ, ತಮ್ಮಯ್ಯ ಸೇರಿದಂತೆ ಅನೇಕ ಗಿರಿಜನ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪಿ.ಕೆ. ಸಿದ್ದಪ್ಪ ಮಾತನಾಡಿ, ಗಿರಿಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಯುತ ಹೋರಾಟಗಳು ನಡೆಯಬೇಕು. ಇನ್ನೂ ಕೂಡ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ಉತ್ತಮ ಮನೆ ನಿರ್ಮಾಣಕ್ಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಯೋಜನೆಯ ಪ್ರಯೋಜನ ಪಡೆಯಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆದಿವಾಸಿಗಳು ಒಗ್ಗಟ್ಟಿನಿಂದ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ರೀತಿಯ ಪ್ರಯೋಜನಗಳನ್ನು ಸರ್ಕಾರದಿಂದ ಪಡೆಯಲು ಕಾರ್ಯೋನ್ಮುಕವಾಗಲು ಸಹಕರಿಸುವಂತೆ ಮನವಿ ಮಾಡಿದರು.