ಮಡಿಕೇರಿ, ಆ. ೯: ಕಗ್ಗೋಡ್ಲು ವಿನಲ್ಲಿ ಆಯೋಜನೆಗೊಂಡಿರುವ ೩೧ನೇ ವರ್ಷದ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ತಾ. ೧೨ ರಂದು ಶನಿವಾರ ನಡೆಯಲಿದ್ದು, ಈ ಬಾರಿ ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಮಂಗಳೂರು, ಕೇರಳದಂತಹ ಹೊರ ಜಿಲ್ಲೆ, ರಾಜ್ಯಗಳಿಂದ ತಂಡಗಳು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಲು ತಂಡದ ಹೆಸರನ್ನು ನೋಂದಾಯಿಸಿ ಕೊಂಡಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟ, ಯೂತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ (ಮಡಿಕೇರಿ ಘಟಕ) ಹಾಗೂ ಕಾವೇರಿ ಯುವಕ ಸಂಘದ ಕಗ್ಗೋಡ್ಲು ಇವರ ಸಂಯುಕ್ತ ಆಶ್ರಯದಲ್ಲಿ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಈಗಾಗಲೇ ಸಾರ್ವಜನಿಕ ವಾಲಿಬಾಲ್ ಪಂದ್ಯಾಟಕ್ಕೆ ೫೫ ತಂಡಗಳು, ಹಗ್ಗಜಗ್ಗಾಟಕ್ಕೆ ಪುರುಷರ ವಿಭಾಗದಲ್ಲಿ ೧೫ ತಂಡಗಳು, ಸಾರ್ವಜನಿಕ ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ೧೨ ತಂಡಗಳು ನೋಂದಾಯಿಸಿ ಕೊಂಡಿದ್ದು, ತಾ. ೧೦ ರವರೆಗೆ ನೋಂದಾವಣೆಗೆ ಅವಕಾಶವಿದ್ದು, ಇನ್ನಷ್ಟು ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳಲಿದೆ ಎಂದು ಸುಕುಮಾರ್ ತಿಳಿಸಿದರು.
ವಿವಿಧ ವಿಭಾಗದ ಓಟದ ಸ್ಪರ್ಧೆಯು ಮಧ್ಯಾಹ್ನದ ನಂತರ ನಡೆಯಲಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು. ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಮಾತನಾಡಿ, ಅಂದು ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸ್‌ರಾಜು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ವಹಿಸಲಿದ್ದು, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕ್ಕುಟ್ಟಿರ ಎಸ್. ಪೊನ್ನಣ್ಣ ವಹಿಸಲಿದ್ದು, ಅತಿಥಿಗಳಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ತೇನನ ರಾಜೇಶ್ ಸೋನಿ, ಜಿಲ್ಲಾ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಬಿ. ಜೋಯಪ್ಪ, ಎಂ.ಕೆ. ವೆಂಕಟೇಶ್, ಗದ್ದೆ ಮಾಲೀಕರಾದ ನಿತ್ಯ, ನಿಯ್ಯಾತ ದೇವಯ್ಯ, ಪ್ರಶಾಂತ್ ವೆಂಕಟರಮಣ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಮಡಿಕೇರಿ ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ಮಾತನಾಡಿ, ಈ ಬಾರಿ ವಿಶೇಷವಾಗಿ ಸಾರ್ವಜನಿಕ ವಿಭಾಗದ ದಂಪತಿಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಗಂಡ-ಹೆAಡತಿ ಕೈ-ಕೈ ಹಿಡಿದು ಕೊಂಡು ಓಡುತ್ತಾ ಅಂತಿಮ ಗೆರೆಯ ತನಕ ಬರತಕ್ಕದ್ದು. ಭಾಗವಹಿಸುವ ದಂಪತಿ ಸ್ಪರ್ಧಾಳುಗಳ ವಯೋಮಿತಿ ೫೦ ವರ್ಷ ಮೇಲ್ಪಟ್ಟಿರಬಾರದು. ಯಾವುದೇ ನೋಂದಾಣಿ ಇಲ್ಲದೆ ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಅಧ್ಯಕ್ಷ ಬಿ.ಡಿ. ದಿಶಾನ್, ಸದಸ್ಯ ಚಿದಾನಂದ ಉಪಸ್ಥಿತರಿದ್ದರು.