ಮಡಿಕೇರಿ, ಆ. ೯: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆಯ ಪ್ರಮಾಣ ಈತನಕವೂ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿಯೇ ಮುಂದುವರೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಸರಾಸರಿ ೩೫ ಇಂಚು ಕಡಿಮೆ ಮಳೆಯಾಗಿದೆ. ೨೦೨೨ರಲ್ಲಿ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಸರಾಸರಿ ೯೯.೧೧ ಇಂಚು ಮಳೆಯಾಗಿತ್ತು. ಈ ವರ್ಷ ಈ ಪ್ರಮಾಣ ೬೪.೦೫ ಇಂಚಿನಷ್ಟಾಗಿದೆ.

ಜಿಲ್ಲೆಯಲ್ಲಿ ಸರಾಸರಿ ೩೫ ಇಂಚು ಕಡಿಮೆ ಮಳೆ

(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಬರೋಬ್ಬರಿ ೫೦ ಇಂಚುಗಳಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ಈ ಅವಧಿಯಲ್ಲಿ ೧೪೩.೪೦ ಇಂಚು ಮಳೆಯಾಗಿದ್ದರೆ, ಈ ವರ್ಷ ೯೪.೨೪ ಇಂಚಿನಷ್ಟಾಗಿದೆ.

ವೀರಾಜಪೇಟೆ ತಾಲೂಕಿನಲ್ಲೂ ಕಳೆದ ವರ್ಷಕ್ಕಿಂತ ೨೯.೪೦ ಇಂಚು ಮಳೆ ಕಡಿಮೆಯಾಗಿದೆ. ಈ ತಾಲೂಕಿನಲ್ಲಿ ಕಳೆದ ಬಾರಿ ೭೫.೭೬ ಇಂಚು ಮಳೆಯಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ೪೬.೩೬ ಇಂಚುಗಳಷ್ಟಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೭೯.೦೮ ಇಂಚು, ಈ ಬಾರಿ ೫೧.೫೫ ಇಂಚು ಮಳೆಯಾಗಿದ್ದು, ಕಳೆದ ಸಾಲಿಗಿಂತ ೨೭.೫೩ ಇಂಚು ಕಡಿಮೆಯಾಗಿದೆ.