ಕೂಡಿಗೆ, ಆ. ೯: ಕೊಡಗು-ಹಾಸನ ಜಿಲ್ಲೆಯ ಗಡಿಭಾಗದ ಮಧ್ಯದಲ್ಲಿರುವ ಕಂತೆನಹಳ್ಳಿ ಕಾವಲು ಎಂಬ ಸಣ್ಣ ಬೆಟ್ಟದ ಕಾಡಿನಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿ ನರಳಾಡಿದೆ. ಅರಣ್ಯ ಸಮೀಪದ ಮನೆಯಿಂದ ನಾಯಿಯನ್ನು ಹಿಡಿದು ಕಾಡಿನೊಳಗೆ ಹೋದ ಉರುಳಿಗೆ ಸಿಲುಕಿಕೊಂಡಿದೆ. ಚಿರತೆಯ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ.
ಗ್ರಾಮಸ್ಥರ ಶಬ್ದಕ್ಕೆ ಮತ್ತಷ್ಟು ಬೆದರಿದ ಚಿರತೆ ಒದ್ದಾಡಿ ಉರುಳನ್ನು ಬಿಡಿಸಿಕೊಂಡು ಅರಣ್ಯದ ಕಡೆಗೆ ಓಡಿದೆ. ಸ್ಥಳಕ್ಕೆ ಅರಕಲಗೂಡು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿದ ತಕ್ಷಣವೇ ಆಗಮಿಸಿ ಪರಿಶೀಲಿಸಿದಾಗ ಸಾಕುನಾಯಿ ಮೃತದೇಹ ಪತ್ತೆಯಾಗಿದೆ.
ಇದೇ ಚಿರತೆ ಕಳೆದ ಕೆಲವು ದಿನಗಳ ಹಿಂದೆ ಅಳುವಾರದಲ್ಲಿ ಮನೆಯ ಹಿಂದೆ ಕಟ್ಟಿದ್ದ ಆಡನ್ನು ಹಿಡಿದು ಸಾಯಿಸಿದೆ.
ಹಾಸನ-ಕೊಡಗು ಗಡಿ ಭಾಗದಲ್ಲಿ ಸಂಚರಿಸುತ್ತಿರುವ ಈ ಚಿರತೆ ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ಹಾವಳಿಯಿಂದ ಸಿದ್ದಲಿಂಗಪುರ, ಅಳುವಾರ, ಭೈರಪ್ಪನಗುಡಿ ವ್ಯಾಪ್ತಿಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.