ಗುಡ್ಡೆಹೊಸೂರು, ಆ. ೮: ಗುಡ್ಡೆಹೊಸೂರು ವ್ಯಾಪ್ತಿಯ ಸೇವಾಭಾರತಿ ಶಾಖೆಯ ವತಿಯಿಂದ ಕುಶಾಲನಗರ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಇಲ್ಲಿನ ದಿವಂಗತ ಸುಭ್ರಾಯ ಭಟ್ ಅವರ ಗದ್ದೆಯಲ್ಲಿ ನಡೆಯಿತು. ಈ ಕ್ರೀಡಾಕೂಟ ತಾಲೂಕು ಸೇವಾ ಭಾರತಿಯ ಪ್ರಮುಖರಾದ ಬೊಟ್ಟು ಮನೆ ರಮೇಶ್ ಅವರ ಉಸ್ತುವಾರಿಯಲ್ಲಿ ನಡೆಯಿತು.

ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದ ಹಂತದಲ್ಲಿ ಕಬಡ್ಡಿ, ಹಗ್ಗಜಗ್ಗಾಟ ಮತ್ತು ಓಟದ ಸ್ಪರ್ಧೆಗಳು ನಡೆದವು. ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಆರ್.ಎಸ್. ಎಸ್. ಸೇವಾ ಪ್ರಮುಖರಾದ ಚಕ್ಕೇರಾ ಮನು ಅವರು ನೆರವೇರಿಸಿದರು.

ಈ ಸಂದರ್ಭ ವಿಭಾಗೀಯ ಸೇವಾ ಬೌಧಿಕ್ ವಿಶ್ವನಾಥ್, ಸೇವಾ ಪ್ರಮುಖ ಜನಾರ್ಧನ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್, ಸೇವಾ ಭಾರತಿಯ ಪ್ರಮುಖ ಮಹೇಂದ್ರ, ಗುಡ್ಡೆ ಹೊಸೂರು, ಗ್ರಾ.ಪಂ. ಸದಸ್ಯರಾದ ಕುಡೆಕ್ಕಲ್ ನಿತ್ಯಾನಂದ, ಬಿ.ಎಂ. ಪ್ರದೀಪ್, ಸಂಘದ ಪ್ರಮುಖ ಮುರುಳೀಧರ, ಗುಡ್ಡೆಹೊಸೂರು ವ್ಯಾಪ್ತಿಯ ಸಂಘದ ಪ್ರಮುಖರಾದ ಹರಿ, ಸಂಪತ್, ಆದೇಶ್, ಶರತ್ ಮುಂತಾದವರು ಹಾಜರಿದ್ದರು.

ಬಿ.ಎಂ. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಪುಟಾಣಿ ಮಕ್ಕಳು ಕೆಸರಿನಲ್ಲಿ ಆಟವಾಡುತ್ತಿದ್ದ ದೃಶ್ಯ ಕಂಡು ಬಂತು, ಕೇವಲ ಸ್ಪರ್ಧೆಗೆ ಮಾತ್ರ ಬರದೆ ಕೆಸರಿನಲ್ಲಿ ಕುಣಿದು ಕುಪ್ಪಳಿಸಿದರು.