ಸೋಮವಾರಪೇಟೆ, ಆ. ೭: ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಪ್ರಗತಿ ಹೊಂದಿದರೆ ದೇಶದ ಪ್ರಗತಿಯನ್ನು ಕಾಣಬಹುದು ಎಂದು ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ ಹೇಳಿದರು.

ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನಡೆದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಆರ್ಥಿಕ ಸಮಸ್ಯೆಯಿಂದ ಯಾವ ಮಕ್ಕಳ ವಿದ್ಯಾಭ್ಯಾಸ ನಿಲ್ಲಬಾರದು, ಇಂತಹ ಸಂಕಷ್ಟದ ಸಮಯದಲ್ಲಿ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ ಆಗಿದೆ ಎಂದರು.

ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಮುಂದೆ ಇರಬೇಕು. ಕಲಿಕೆಗೆ ಆರೋಗ್ಯವೂ ಮುಖ್ಯವಾಗಿರುತ್ತದೆ. ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸು ವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿ ರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅತೀ ಬುದ್ಧಿವಂತರು ಮಾತ್ರ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ ಎಂಬ ಭ್ರಮೆ ಯಾರಿಗೂ ಬೇಡ, ಕೀಳರಿಮೆ ತೊಡೆದು ಹಾಕಿ, ನಿರಂತರ ಕಲಿಕೆಯಿಂದ ಸಾಧನೆ ಮಾಡಬಹುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಒಂದೇ ಬಾರಿ ಬರುವುದು. ವಿದ್ಯಾರ್ಥಿಗಳಿಗೂ ನೀತಿ ಸಂಹಿತೆ ಇದೆ. ಅದನ್ನು ಪರಿಪಾಲಿಸಲೇಬೇಕು. ಯಶಸ್ಸಿನ ತತ್ವಗಳನ್ನು ಪ್ರತಿದಿನ ಕಲಿಯಬೇಕು. ಮನೋಭಾವನೆಯೇ ಸರ್ವಸ್ವ, ವಿದ್ಯಾರ್ಥಿಗಳಲ್ಲಿ ಸಮತೋಲನ ವ್ಯಕಿತ್ವ ನಿರ್ಮಾಣ ಆಗಬೇಕಿದೆ. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ದಾರ್ಶನಿಕರ ಉಪದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರುಗಳು ಹೇಳಿಕೊಟ್ಟ ಪಾಠಗಳನ್ನು ಶ್ರದ್ಧೆಯಿಂದ ಕೇಳಿ, ಮನನ ಮಾಡಿಕೊಂಡರೆ ಉತ್ತಮ ಅಂಕಗಳನ್ನು ಪಡೆಯ ಬಹುದು ಎಂದು ಕಿವಿಮಾತು ಹೇಳಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಗ್ರಾಮೀಣ ಭಾಗದ ರೈತರ ಮಕ್ಕಳಿಗೂ ಗುಣಮಟ್ಟದ ಹಾಗೂ ಆಂಗ್ಲ ಮಾಧ್ಯಮದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಕುವೆಂಪು ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇವೆ. ಹತ್ತನೆ ತರಗತಿಯಲ್ಲಿ ಸತತ ಆರನೇ ಬಾರಿ ಶೇ.೧೦೦ರ ಫಲಿತಾಂಶ ವನ್ನು ಶಾಲೆ ಪಡೆದಿದೆ. ಈ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ತೆರೆದಿದ್ದೇವೆ. ನೀಟ್, ಸಿ.ಇ.ಟಿ ತರಬೇತಿ ತರಗತಿಗಳನ್ನು ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಗಣಪತಿ, ವಿದ್ಯಾ ಸಂಸ್ಥೆಯ ಭಾತ್ಮೀದಾರ ಕೆ.ಎಂ. ಜಗದೀಶ್, ಲಿಂಗರಾಜು, ಕೆ.ಟಿ. ಪರಮೇಶ್, ನಂದಕುಮಾರ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್, ಡಿಸಿಸಿ ಬ್ಯಾಂಕ್ ಸದಸ್ಯ ಭರತ್ ಕುಮಾರ್ ಹಾಗು ಸಂಘದ ಆಡಳಿತ ಮಂಡಳಿ ಪದಾಧಿ ಕಾರಿಗಳು, ಮುಖ್ಯ ಶಿಕ್ಷಕಿ ಮಿಲ್‌ಗ್ರೆಡ್ ಗೋನ್ಸಾಲ್ವೆಸ್, ಕಾಲೇಜು ವಿದ್ಯಾರ್ಥಿ ನಾಯಕಿ ವೈ.ಎಸ್.ಧನ್ಯ ಇದ್ದರು. ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿಜ್ಞಾನ ಪ್ರಯೋಗಾಲಯ ಹಾಗೂ ನೀಟ್ ಮತ್ತು ಸಿ.ಇ.ಟಿ. ತರಬೇತಿ ತರಗತಿಗೆ ಶಾಸಕರು ಚಾಲನೆ ನೀಡಿದರು.