ವೀರಾಜಪೇಟೆ, ಆ. ೭: ಪಟ್ಟಣದ ಪುರಸಭೆ ವ್ಯಾಪ್ತಿಯ ತಾಲೂಕು ಮೈದಾನದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿರುವುದನ್ನು ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘ ಖಂಡಿಸುವುದಲ್ಲದೆ ಇದೇ ರೀತಿ ಮುಂದುವರೆದರೆ ವಿವಿಧ ಸಂಘ-ಸAಸ್ಥೆಗಳ ಸಹಾಯದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.

ತಹಶೀಲ್ದಾರ್ ರಾಮಚಂದ್ರ ಅವರಿಗೆ ಲಿಖಿತ ಮಾಹಿತಿ ನೀಡಿದ ಅವರು, ವೀರಾಜಪೇಟೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು ಸಮಪರ್ಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ತಾಲೂಕು ಮೈದಾನದ ಸುತ್ತಮುತ್ತ ತಾಲೂಕು ಕಛೇರಿ, ಎಸ್.ಬಿ.ಐ., ಕೇಂದ್ರ ಗ್ರಂಥಾಲಯ, ಪುರಸಭೆ, ಆರ್ಮಿ ಕ್ಯಾಂಟೀನ್, ನ್ಯಾಯಾಲಯ, ಎಲ್.ಐ.ಸಿ., ಇತರೆ ಸಂಘ-ಸAಸ್ಥೆಗಳಿಗೆ ಬರುವಂತಹ ಗ್ರಾಹಕರು ವಾಹನ ನಿಲುಗಡೆಗಾಗಿ ತಾಲೂಕು ಮೈದಾನವನ್ನು ಬಳಸಿಕೊಳ್ಳುತ್ತಿದ್ದರು. ವೀರಾಜಪೇಟೆ ಎಸ್.ಬಿ.ಐ. ಶಾಖೆಯಲ್ಲಿ ೭ ಸಾವಿರಕ್ಕೂ ಅಧಿಕ ಖಾತೆದಾರರು ಇದ್ದು, ಪ್ರತಿನಿತ್ಯ ನೂರಾರು ಖಾತೆದಾರರು ತಮ್ಮ ವ್ಯವಹಾರದಲ್ಲಿ ತೊಡಗಿರುತ್ತಾರೆ. ಅಲ್ಲದೇ ತಾಲೂಕು ಕಛೇರಿಗೆ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆ ಅವಕಾಶವಿರುವುದಿಲ್ಲ. ಈವರೆಗೆ ನಿಲುಗಡೆಗೊಳಿಸುತ್ತಿದ್ದ ತಾಲೂಕು ಮೈದಾನಕ್ಕೆ ಗೇಟ್ ಅಳವಡಿಸಿ ಪಾರ್ಕಿಂಗ್ ನೀಡದಿರುವ ವ್ಯವಸ್ಥೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ.

ವೀರಾಜಪೇಟೆ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳಿದ್ದು, ಒಂದರೆಡು ಕಟ್ಟಡಗಳನ್ನು ಹೊರತು ಪಡಸಿದರೆ ಉಳಿದ ಯಾವುದೇ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಕಟ್ಟಡದ ನೆಲಮಾಳಿಗೆಯನ್ನು ಕೂಡ ವಾಣಿಜ್ಯ ಬಳಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಸರಕಾರಿ ಕಟ್ಟಡವಾದ ಮಿನಿ ವಿಧಾನ ಸೌಧವನ್ನು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈಗಿರುವ ಪಾರ್ಕಿಂಗ್ ರಸ್ತೆ ಬದಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಅಂಗಡಿ ಮಾಲೀಕರುಗಳು ತಮ್ಮ ವಾಹನಗಳನ್ನು ತಂದು ಬೆಳಗ್ಗಿನಿಂದ ಸಂಜೆಯವರೆಗೆ ನಿಲುಗಡೆಗೊಳಿಸಿರುತ್ತಾರೆ. ಗ್ರಾಮಾಂತರ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಇದ್ದಂತಹ ಒಂದು ವಾಹನ ನಿಲುಗಡೆ ಪ್ರದೇಶಕ್ಕೆ ಪುರಸಭೆ ಗೇಟ್ ಅಳವಡಿಸಿದೆ. ಈ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭ ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ಪಟ್ರಪಂಡ ಕರುಂಬಯ್ಯ, ಕಾರ್ಯದರ್ಶಿ ಪುಗ್ಗೇರ ನಂದ, ಖಜಾಂಚಿ ತೋರೇರ ಪೂವಯ್ಯ ಹಾಜರಿದ್ದರು.