ಕುಶಾಲನಗರ, ಆ. ೬: ನದಿ ಕೆರೆ ಜಲಮೂಲಗಳ ಸಂರಕ್ಷಣೆಗೆ ಸರಕಾರ, ಸಂಘ ಸಂಸ್ಥೆಗಳು ಕಾರ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಕುಶಾಲನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಸುಮನ್ ಬಾಲಚಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ ೧೪೭ನೆಯ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಭಿವೃದ್ಧಿಯ ನಡುವೆ ಪ್ರಕೃತಿಗೆ ಹಾನಿಯಾಗದಂತೆ ಎಲ್ಲರೂ ಎಚ್ಚರ ವಹಿಸಬೇಕು. ಲಯನ್ಸ್ ಸಂಸ್ಥೆಯ ಮೂಲಕ ನದಿ ಪ್ರಕೃತಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕ್ರಮಗಳಿಗೆ ಲಯನ್ಸ್ ಮೂಲಕ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಾಸವಿ ಯುವ ಜನ ಸಂಘದ ಪ್ರಮುಖರಾದ ವಿ ವೈಶಾಕ್ ಮಾತನಾಡಿ, ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನದಿ ಜಾಗೃತಿ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವ ಆರತಿ ಬಳಗದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅರ್ಚಕರಾದ ಯೋಗೀಶ್ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಟಿ ಕೆ ರಾಜಶೇಖರ್, ಖಜಾಂಚಿ ನಿತಿನ್ ಗುಪ್ತ, ವಾಸವಿ ಯುವಜನ ಸಂಘದ ಪ್ರವೀಣ್ ಕುಮಾರ್, ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.