ಗೋಣಿಕೊಪ್ಪಲು, ಆ. ೬: ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದಿಂದ ಕಕ್ಕಡ ನಮ್ಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಮಹಿಳೆಯರು ಮದ್ದು ಸೊಪ್ಪಿನಿಂದ ವಿವಿಧ ರೀತಿಯಲ್ಲಿ ತಯಾರಿಸಿದ ಘಮಘಮಿಸುವÀ ಪಾಯಸ, ಮದ್ದ್ಪುಟ್ಟ್ ಹಾಗೂ ನೂಲ್‌ಪುಟ್ಟ್ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ವಿವಿಧ ಕ್ರೀಡೆಯಲ್ಲಿ ತೊಡಗಿಸಿಕೊಂಡರು.
ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆÀ ಕೊಟ್ಟಂಗಡ ವಿಜು ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸದಾ ಕೆಲಸದ ಒತ್ತಡದಲ್ಲಿರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಕೊಡಗಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ವಿಶೇಷವಾಗಿದೆ. ಬಹುಮಾನಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಜೀವನ ಸಾಗಿಸಬೇಕು.
ಮದ್ದು ಸೊಪ್ಪು ವಿಶೇಷ ಗುಣಗಳುಳ್ಳ ಗಿಡವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮದ್ದು ಸೊಪ್ಪಿನ ಗಿಡಗಳನ್ನು ಹುಡುಕುವ ಪರಿಸ್ಥಿತಿಗೆ ನಾವುಗಳು ಬಂದು ತಲುಪಿದ್ದೇವೆ. ಪ್ರತಿ ಮನೆಯಲ್ಲಿ ಹಾಗೂ ತೋಟಗಳಲ್ಲಿ ಈ ಅಪರೂಪದ ಸೊಪ್ಪುಗಳನ್ನು ಬೆಳೆಯುವ ಮೂಲಕ ಮುಂದಿನ ಪೀಳಿಗೆಗೆ ಸೊಪ್ಪಿನ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ವಿಶೇಷವಾಗಿ ಆಸಕ್ತಿ ವಹಿಸಬೇಕು. ಪಟ್ಟಣದಲ್ಲಿರುವ ಮಹಿಳೆಯರು ಹೂವಿನ ಚಟ್ಟಿಯಲ್ಲಿ ಮದ್ದುಸೊಪ್ಪು ಗಿಡಗಳನ್ನು ಬೆಳೆಸಿ ಕಾಪಾಡಬೇಕು ಎಂದು ತಿಳಿಸಿದ ಅವರು ಕಕ್ಕಡ ನಮ್ಮೆಯ ವಿಶೇಷತೆ ಬಗ್ಗೆ ತಿಳಿಸಿದರು.
ಮುಂಜಾನೆಯಿAದ ಸಂಜೆಯವರೆಗೂ ಮಹಿಳೆಯರಿಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಡುಗಾರಿಕೆ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ನೀಡಲಾಯಿತು. ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ದಿನ ಕಳೆದರು. ಕಾರ್ಯಕ್ರಮದಲ್ಲಿ ಚೋವಂಡ ಜಮುನಾ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಕಾರ್ಯದರ್ಶಿಗಳಾದ ಮುಕ್ಕಾಟೀರ ಬೀನಾ ಪ್ರಸನ್ನ ಸ್ವಾಗತಿಸಿ, ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಪರದಂಡ ಸುಮಿ ಬೋಪಣ್ಣ, ಆಪಟ್ಟೀರ ಸೌಮ್ಯ ಮೊಣ್ಣಪ್ಪ, ಮಲ್ಲೆಂಗಡ ಮಮತ ಪೂಣಚ್ಚ, ಉಪಸ್ಥಿತರಿದ್ದರು.