ಶನಿವಾರಸಂತೆ, ಆ. ೫: ಸಮೀಪದ ದುಂಡಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಮಾದ್ರೆ, ದುಂಡಳ್ಳಿ, ಬಿಳಾಹ ಇತರ ಗ್ರಾಮಗಳ ಗದ್ದೆಗಳಲ್ಲಿ ರಾತ್ರಿ ಸಮಯ ನುಗ್ಗುವ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುತ್ತಾ ನಾಟಿಗೆ ಸಿದ್ಧಗೊಂಡಿದ್ದ ಭತ್ತದ ಸಸಿಮಡಿಗಳನ್ನು ತುಳಿದು ನಾಶಪಡಿಸಿವೆ. ಗಜಪಡೆಯ ಉಪಟಳದಿಂದ ರೈತರು ಕಂಗಾಲಾಗಿ ತಲೆಮೇಲೆ ಕೈಇಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಮಳೆ ವಿಳಂಬವಾಗಿದ್ದು ಭತ್ತದ ಬಿತ್ತನೆ ಬೀಜ ಸಕಾಲಕ್ಕೆ ಸಿಗದೆ ಸಮಸ್ಯೆಯಾಗಿ ಗದ್ದೆಯಲ್ಲಿ ಅಗೆ ಹಾಕುವುದು ತಡವಾಗಿತ್ತು. ಇದೀಗ ಸಸಿಮಡಿ ಬೆಳೆದಿದ್ದು ನಾಟಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಐದಾರು ಆನೆಗಳ ಹಿಂಡು ಗದ್ದೆಗಳಿಗೆ ನುಗ್ಗಿ ಸಸಿಮಡಿಯನ್ನೆಲ್ಲಾ ಧ್ವಂಸಗೊಳಿಸಿವೆ ಎಂದು ಮಾದ್ರೆ ಗ್ರಾಮದ ರೈತರಾದ ದೇವೇಗೌಡ, ತಮ್ಮಣ್ಣ, ತೇಜಸ್ ಇತರರು ಅಳಲು ತೋಡಿಕೊಂಡಿದ್ದಾರೆ.
ನೆರೆಯ ಯಸಳೂರು ಮೀಸಲು ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ದೊಡ್ಡಬಿಳಾಹ ಗ್ರಾಮದ ಆನೆಗೇಟ್ ಮೂಲಕ ಬಿಳಾಹ, ಮಾದ್ರೆ ಗ್ರಾಮದಲ್ಲಿ ಸಂಚರಿಸುತ್ತಾ ಗದ್ದೆಗಳಿಗೆ ನುಗ್ಗಿ ನಾಟಿಗೆ ಸಿದ್ಧಗೊಂಡಿದ್ದ ಸಸಿಮಡಿಗಳನ್ನು ನಾಶಪಡಿಸುತ್ತಿವೆ. ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಪಡಿಸಿವೆ. ಮತ್ತೆ ಬೀಜ ಬಿತ್ತನೆ, ನಾಟಿ ಎಂಬುದು ಸಾಧ್ಯವಿಲ್ಲ ಎನ್ನುತ್ತಾರೆ ರೈತರು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪ್ರತಿಕ್ರಿಯಿಸಿ, ಕಾಡಾನೆಗಳನ್ನು ಯಸಳೂರು ಮೀಸಲು ಅರಣ್ಯಕ್ಕೆ ಅಟ್ಟುವ ಕಾರ್ಯ ನಡೆದಿದೆ. ಎಡೆಹಳ್ಳಿಯತ್ತ ವಾಪಸ್ಸು ಬಂದಿರುವ ಆನೆಗಳು ಇನ್ನೆರೆಡು ದಿನಗಳಲ್ಲಿ ದಾಟಿ ಅರಣ್ಯ ಸೇರುತ್ತವೆ. ಯಸಳೂರು ಅರಣ್ಯದ ಸುತ್ತ ಸೋಲಾರ್ ಬೇಲಿ ನಿರ್ಮಿಸಿದ್ದರೂ ಆನೆಗಳು ಕಾಲುದಾರಿಯಲ್ಲಿ ಸಂಚರಿಸುತ್ತವೆ. ಮಾದ್ರೆ ಗ್ರಾಮದ ರೈತರು ಅರ್ಜಿ ಸಲ್ಲಿಸಿದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಅಕ್ಕಪಕ್ಕದಲ್ಲಿ ಗದ್ದೆ-ತೋಟಗಳಿರುವ ನಾಲ್ಕೆöÊದು ರೈತರು ಒಟ್ಟಿಗೆ ಸೇರಿ ಸೋಲಾರ್ ಬೇಲಿ ಅಳವಡಿಸಿಕೊಂಡರೆ ಆನೆಗಳ ಉಪಟಳವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.