ನಾಪೋಕ್ಲು, ಆ. ೪ : ಸರ್ಕಾರದ ಸೌಲಭ್ಯಗಳನ್ನು ಹೊಂದಿಕೊಳ್ಳಲು ಜನಾಂಗದವರು ಪ್ರಯತ್ನಿಸಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು. ಇಲ್ಲಿನ ಕೊಡವ ಸಮಾಜದ ಅಧೀನದಲ್ಲಿರುವ ಪೊಮ್ಮಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮೂರನೇ ವರ್ಷದ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಜನಾಂಗದ ಸಂಖ್ಯೆ ವೃದ್ಧಿ ಆಗಬೇಕು. ಸಮುದಾಯದ ಪ್ರತಿಯೊಬ್ಬರೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂಥದ್ದು ಅವಶ್ಯಕ. ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಇದರಿಂದ ಜನಾಂಗದ ಅಭಿವೃದ್ಧಿ ಸಾಧ್ಯ. ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಜನಾಂಗ ರೂಡಿಸಿಕೊಳ್ಳಬೇಕು ಎಂದ ಅವರು ಸಮಾಜದ ಮಕ್ಕಳಿಗೆ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಬೇಕು. ಕೃಷಿಯನ್ನು ನಂಬಿ ಬದುಕುವ ಜನಾಂಗದವರು ಆಸ್ತಿಯನ್ನು ಮಾರಾಟ ಮಾಡಬಾರದು ಎಂದು ಸಲಹೆಯಿತ್ತರು.
ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ ಕೊಡವ ಜನಾಂಗದವರಿಗೆ ಪರಿಶಿಷ್ಟ ವರ್ಗದ ಮಾನ್ಯತೆ ಸಿಗುವಂತಾಗಬೇಕು. ಆ ಮೂಲಕ ಜನಾಂಗದ ಸಾಮಾಜಿಕ ಭದ್ರತೆಗೆ ಸಹಕಾರಿಯಾಗಲಿದೆ ಎಂದರು. ಉನ್ನತ ಸ್ಥಾನಕ್ಕೇರುವ ಜನಾಂಗದ ಬಗ್ಗೆ ಮತ್ಸರ ಪಡಬಾರದು. ಇಂಗ್ಲೀಷ್ ವ್ಯಾಸಂಗ ಮಾಡುವುದರ ಮೂಲಕ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ಆದರೆ ಇಂಗ್ಲೀಷ್ ಗುಲಾಮಗಿರಿಯ ಸಂಕೇತ. ಭಾಷೆಯನ್ನು ಉನ್ನತಿಗೆ ಬಳಸಬೇಕು, ಭಾಷೆ ನಾಶವಾದರೆ ಜನಾಂಗ ನಾಶವಾದಂತೆ. ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾಗಲಿ. ಹಬ್ಬ, ಹರಿದಿನ, ಆಚಾರ, ವಿಚಾರಗಳಲ್ಲಿ ಕೊಡವ ಭಾಷೆಯ ಬಳಕೆ ಹೆಚ್ಚು ಹೆಚ್ಚು ಆಗಬೇಕು. ಭಾಷೆ ಉಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.
ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ಅವಿರತ ಶ್ರಮದಿಂದ ಮಾತ್ರ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂಥದ್ದು ಪೋಷಕರ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೆರ ರೇಖಾ ಪ್ರಕಾಶ್, ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡÀ ರಾಣಿ ಮಾಚಯ್ಯ, ಅಂಕುರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕೇಟೋಳಿರ ರತ್ನ ಚರ್ಮಣ್ಣ, ಜ್ಞಾನೋದಯ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಚೀಯಕಪೂವಂಡ ಶ್ವೇತನ್ ಚಂಗಪ್ಪ, ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪÀದಿರ ಶಾರದಾ ನಂಜಪ್ಪ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ತೀನಿ ನಮ್ಮೆ ಕಾರ್ಯಕ್ರಮವನ್ನು ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ ಉದ್ಘಾಟಿಸಿದರು. ತಿನಿಸುಗಳ ಪ್ರದರ್ಶನವನ್ನು ನಿವೃತ್ತ ಪೋಸ್ಟ್ ಮಾಸ್ಟರ್ ಪೆಬ್ಬಾಟಂಡ ಪುಷ್ಪ ಪೆಮ್ಮಯ್ಯ ಉದ್ಘಾಟಿಸಿದರು. ಕೋಟೆರ ನೈಲ್ ಚನ್ನಪ್ಪ ಮಕ್ಕಳ ಬಾಕೆ ಬುಡುವಲ್ಲಿ ಅವ್ವಂಡÀ ಮೇನತ್ ಕುರಿತು ವಿಚಾರ ಮಂಡನೆ ಮಾಡಿದರು.
ಬಾಯಲ್ಲಿ ನೀರೂರಿಸುವ ಮಳೆಗಾಲದ ಖಾದ್ಯಗಳಾದ ಸಾರು, ಸಾಂಬಾರು, ಚಟ್ನಿ, ಪಲ್ಯ ಸೇರಿದಂತೆ ನೂರಾರು ತಿನಿಸುಗಳ ಸ್ಪರ್ಧೆ ನಡೆಯಿತು. ವಿಜೇತರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿ ಶುಭ ಕೋರಿದರು.
ಕುಂಡ್ಯೋಳAಡ ಕವಿತಾ, ಕುಲ್ಲೇಟಿರ ಹೇಮಾ ಅರುಣ್ ಬೇಬ, ಅಜ್ಜೆಟ್ಟಿರ ರಾಣಿ, ಕಲಿಯಂಡ ಬೀನಾ ನವೀನ್ , ಬಿದ್ದಂಡ ಉಷಾದೇವಮ್ಮ ಸನ್ಮಾನಿತ ರನ್ನು ಸಭೆಗೆ ಪರಿಚಯಿಸಿದರು. ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ ,ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹಕಾರ್ಯದರ್ಶಿ ಮಾಚೆಟ್ಟಿರ ಕುಶು ಕುಶಾಲಪ್ಪ ಖಜಾಂಚಿ ಅಪ್ಪಾರಂಡ ಸುಧೀರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಲಿಯಂಡ ಬೀನಾ ನವೀನ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಅಪ್ಪಾರಂಡ ನಂದಿನಿ ನಂಜಪ್ಪ ಸ್ವಾಗತಿಸಿದರು. ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ಬಿದ್ದಂಡ ಉಷಾದೇವಮ್ಮ ವಂದಿಸಿದರು.
-ದುಗ್ಗಳ