ಮಡಿಕೇರಿ, ಆ. ೪: ಡಾ.ಕಸ್ತೂರಿ ರಂಗನ್ ವರದಿಯ ಸಾಧಕ, ಬಾಧಕಗಳÀ ಬಗ್ಗೆ ವಾಸ್ತವತೆ ತಿಳಿಯುವ ನಿಟ್ಟಿನಲ್ಲಿ ತಾ.೧೧ ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಜಿಲ್ಲೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ಅಥವಾ ಸಿದ್ದಾಪುರದಲ್ಲಿ ವಿಚಾರಗೋಷ್ಠಿ ಮತ್ತು ಸಂವಾದವನ್ನು ಆಯೋಜಿಸಲಾಗುವುದು. ಗೋಷ್ಠಿಯಲ್ಲಿ ಪರಿಸರ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಲೆನಾಡು ಪ್ರದೇಶದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪರಿಸರವನ್ನು ಕಾಪಾಡುವ ಕಾರಣ ನೀಡಿ ಸೂಕ್ಷö್ಮ ವಲಯ ಎಂದು ಘೋಷಿಸಲು ಕಸ್ತೂರಿ ರಂಗನ್ ೨೦೧೩ ಏಪ್ರಿಲ್ ೧೫ ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕವಾಗಿದ್ದು, ಇದು ರೈತರಿಗೆ ಮಾರಕವಾಗಿದೆ. ಮಲೆನಾಡು ಪ್ರದೇಶದಲ್ಲಿ ವಾಸಿಸುತ್ತಿರುವ ರೈತರು, ಕಾರ್ಮಿಕರು, ಆದಿವಾಸಿ ಬುಡಕಟ್ಟು ಜನರ ಬದುಕು ಮತ್ತು ಮೂಲಭೂತ ಹಕ್ಕನ್ನು ವರದಿ ಕಸಿದುಕೊಳ್ಳಲಿದೆ. ಇದನ್ನು ಈ ಹಿಂದೆ ಕಾಂಗ್ರೆಸ್ ಮತ್ತು ಇತರ ಸರ್ಕಾರಗಳು ತಿರಸ್ಕರಿಸಿದ್ದು, ಪ್ರಸ್ತುತ ಸರ್ಕಾರ ಕೂಡ ಇದೇ ನಿರ್ಧಾರಕ್ಕೆ ಬದ್ಧವಾಗಿರಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪದಿಂದ ಜನ ಜೀವನ ಅಸ್ತವ್ಯಸ್ತಗೊಂಡು, ಬೆಳೆ ಹಾಗೂ ಜಮೀನು ಹಾನಿಯಾಗಿ ರೈತರು ಸಾಲದಲ್ಲಿ ಸಿಲುಕಿದ್ದಾರೆ. ಕಳೆದ ೨೦ ವರ್ಷಗಳಿಂದ ಮಾನವ ಮತ್ತು ವನ್ಯಪ್ರಾಣಿ ಸಂಘರ್ಷದಿAದ ಪ್ರಾಣ ಹಾನಿ ಹಾಗೂ ಅಧಿಕ ಪ್ರಮಾಣದ ಬೆಳೆ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯ ಪ್ರಸ್ತಾಪ ರೈತರ ಪಾಲಿಗೆ ಮಾರಕವಾಗಿದೆ ಎಂದರು.
ಆದ್ದರಿಂದ ಇಎಸ್‌ಎ ಬಫರ್ ವಲಯ ವರ್ಗೀಕರಣವನ್ನು ಸಂಪೂರ್ಣವಾಗಿ ಕೈ ಬಿಡುವಂತೆ ಕರ್ನಾಟಕ ಸರಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮಾರ್ಪಾಡುಗಳನ್ನ ಮಾಡಬೇಕು ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿ, ಜನರು ವಾಸವಿರುವ ಗ್ರಾಮಗಳನ್ನು ಮತ್ತು ರೈತರ ಹೊಲ, ಗದ್ದೆ, ತೋಟಗಳನ್ನು ಸೂಕ್ಷö್ಮ ವಲಯವೆಂದು ವರದಿಯಲ್ಲಿ ಘೋಷಿಸಿರುವುದನ್ನು ಕೇರಳ ರಾಜ್ಯ ಕೈ ಬಿಟ್ಟ ಮಾದರಿಯಲ್ಲೇ ಕರ್ನಾಟಕದಲ್ಲೂ ಕೈ ಬೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಜನರ ಭಾವನೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡರೆ ಮಲೆನಾಡು ಪ್ರದೇಶದ ರೈತರು ಒಗ್ಗೂಡಿ ದೊಡ್ಡಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ ಹಾಗೂ ಮೈಸೂರು ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಉಪಸ್ಥಿತರಿದ್ದರು.