ಮಡಿಕೇರಿ, ಆ. ೩ : ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ, ಮತ್ತು ನೈರ್ಮಲ್ಯ ಕಾಪಾಡಿಕೊಂಡು ಸೊಳ್ಳೆಗಳ ನಿಯಂತ್ರಣ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಹೇಳಿದರು.

ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ರೋಗ ಹರಡುವಿಕೆ, ನಿಯಂತ್ರಣ ಕುರಿತು ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ‘ರಾಷ್ಟಿçÃಯ ಮಲೇರಿಯಾ ವಿರೋಧಿ ಮಾಸಾಚರಣೆ’ ಅಂಗವಾಗಿ ಮಡಿಕೇರಿ ತಾಲೂಕಿನ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಏರ್ಪಡಿಸಿದ್ದ ಅಡ್ವೊಕೆಸಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ತಮ್ಮ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಮಕ್ಕಳು ಹಾಗೂ ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತಿ ಮೂಡಿಸಬೇಕು ಎಂದರು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಎಲ್ಲಾ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಡಾ.ಸತೀಶ್ ಕುಮಾರ್ ಹೇಳಿದರು.

ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಸ್ಲೈಡ್ಸ್ ಪ್ರದರ್ಶನದ ಮೂಲಕ ಮಾಹಿತಿ ನೀಡಿದ ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಎಲ್. ಶ್ರೀನಿವಾಸ್, ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ರೋಗಗಳು ಹರಡುವ ಕ್ರಮ ಮತ್ತು ಇವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು. ಸೊಳ್ಳೆಗಳ ಆಶ್ರಯ ತಾಣಗಳನ್ನು ನಿರ್ಮೂಲನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು. ರೋಗವಾಹಕಗಳ ನಿಯಂತ್ರಣ ಕುರಿತ ಕೈಪಿಡಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಬಿಡುಗಡೆಗೊಳಿಸಿದರು.

ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತೆ ಕುರಿತು ಸ್ಲೆöÊಡ್ಸ್ಗಳ ಮೂಲಕ ಮಾಹಿತಿ ನೀಡಿದ ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಯು. ಚೇತನ್, ಸೊಳ್ಳೆಗಳ ನಿಯಂತ್ರಣ ಅತಿ ಮುಖ್ಯವಾಗಿದ್ದು, ಮನೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಟೈರುಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ನೀರಿನ ಮೂಲಗಳಿಗೆ ಸೊಳ್ಳೆ ಪ್ರವೇಶಿಸದಂತೆ ಕ್ರಮವಹಿಸಬೇಕು ಎಂದರು.

ಶಾಲೆಗಳಲ್ಲಿ ಆರೋಗ್ಯ ಅಭಿಯಾನ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಆರೋಗ್ಯ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಸ್ಲೆöÊಡ್ಸ್ಗಳ ಮೂಲಕ ಸೊಳ್ಳೆಗಳ ಹರಡುವಿಕೆ ಮತ್ತು ಸೊಳ್ಳೆಗಳ ನಿಯಂತ್ರಣದ ಕುರಿತು ಹಾಗೂ ಕಾರ್ಯಾಗಾರದ ಸಂಯೋಜಕ ಜಿ.ಶ್ರೀಹರ್ಷ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್, ಸಮುದಾಯ ಆರೋಗ್ಯಾಧಿಕಾರಿ ಕಲ್ಮೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಿ.ಆರ್.ಲೋಕೇಶ್, ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಐ.ಜೆ.ಜೆನೆಟ್, ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ಮುರುಗೇಶ್ ಇದ್ದರು.