ಸಿದ್ದಾಪುರ, ಆ. ೩: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಾಹನಕ್ಕಾಗಿ ಕಾರ್ಮಿಕನೋರ್ವ ಬರೋಬ್ಬರಿ ೧.೨೫ ಲಕ್ಷ ರೂ. ಕಳೆದುಕೊಂಡು ಪೊಲೀಸ್ ಮೆಟ್ಟಿಲೇರಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಫೇಸ್‌ಬುಕ್‌ನಲ್ಲಿ ಕಡಿಮೆ ದರದಲ್ಲಿ ವಾಹನ ಮಾರಾಟಕ್ಕಿದೆ ಎಂಬ ತಲೆಬರಹದೊಂದಿಗೆ ಮಹೀಂದ್ರ ಸಂಸ್ಥೆಯ ಬೊಲೆರೋ ವಾಹನದ ಚಿತ್ರ ಹಾಕಲಾಗಿತ್ತು. ಇದನ್ನು ಕಂಡ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗಣೇಶ ಎಂಬಾತ ವಾಹನದ ಆಸೆಗೆ ಚಿತ್ರದಲ್ಲಿ ತೋರಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಈ ಸಂದರ್ಭ ಕರೆ ಸ್ವೀಕರಿಸಿದ ವ್ಯಕ್ತಿಯು ತಾನು ಬೆಂಗಳೂರಿನಲ್ಲಿ ನೆಲೆಸಿದ್ದು, ಸೈನ್ಯದಲ್ಲಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ತದ ನಂತರ ಕರೆ ಮಾಡಿದ ಗಣೇಶನ ವಾಟ್ಸ್ಆಪ್‌ಗೆ ತನ್ನ ಗುರುತಿನ ಚೀಟಿ ಹಾಗೂ ವಾಹನದ ಮಾಹಿತಿಯನ್ನು ಕಳುಹಿಸಿದ್ದಾನೆ. ಇದನ್ನು ನಂಬಿದ ಗಣೇಶ ವಾಹನ ಬೇಕಾಗಿದೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾನೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ರೂ. ೧ ಲಕ್ಷಕ್ಕೆ ವಾಹನ ನೀಡಲಾಗುವುದು, ಮುಂಗಡವಾಗಿ ಹತ್ತು ಸಾವಿರ ಹಣ ಪಾವತಿಸುವಂತೆ ಸೂಚಿಸಿದ್ದಾನೆ. ಕೂಡಲೇ ಗಣೇಶ ಫೋನ್ ಪೇ ಮೂಲಕ ಹತ್ತು ಸಾವಿರ ಹಣವನ್ನು ಪಾವತಿಸಿದ್ದಾನೆ. ಈ ಸಂದರ್ಭ ಕಾರ್ಮಿಕನ ಮೊಬೈಲ್‌ಗೆ ವಾಹನದ ಡೆಲಿವರಿ ರಿಪೋರ್ಟ್ ಕಳುಹಿಸಲಾಗಿತ್ತು. ತದ ನಂತರ ಆ ವ್ಯಕ್ತಿಯು ವಾಹನದ ಜಿಪಿಎಸ್ ಸ್ಥಗಿತವಾಗಿದೆ. ೨೫ ಸಾವಿರ ರೂ. ಕಳುಹಿಸುವಂತೆ ಕೋರಿದ್ದಾನೆ. ಗಣೇಶ ಪೋನ್ ಪೇ ಮೂಲಕ ೨೫ ಸಾವಿರ ರೂ. ಕಳುಹಿಸಿದ್ದಾನೆ. ಹೀಗೆ ಒಟ್ಟು ರೂ. ೧ ಲಕ್ಷದ ೨೫ ಸಾವಿರ ರೂ. ಹಣವನ್ನು ಅಪರಿಚಿತ ವ್ಯಕ್ತಿಗೆ ಗಣೇಶ ನೀಡಿದ್ದಾನೆ. ತದ ನಂತರ ವ್ಯಕ್ತಿಗೆ ಕರೆ ಮಾಡಿದ ಸಂದರ್ಭ ಕರೆಯನ್ನು ಸ್ವೀಕರಿಸದೇ ಇದ್ದದ್ದು ಕಂಡುಬAದಿದ್ದು, ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತೀಚೆಗೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಯುವಕನೋರ್ವ ಕೂಡ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಾಹನ ಖರೀದಿಸಲೆಂದು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಕೂಡ ನಡೆದಿತ್ತು. -ವಾಸು