ಸೋಮವಾರಪೇಟೆ, ಆ. ೪: ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಭಾರತ ಸೇವಾದಳದ ಕೊಡಗು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಒಂದು ದಿನದ ಮಿಲಾಫ್ ತರಬೇತಿ ಕಾರ್ಯಾಗಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಹಿಷ್ಕರಿಸಿದರೆ, ಸಂಘದ ನಿರ್ಧಾರಕ್ಕೆ ಕೆಲ ಶಿಕ್ಷಕರೇ ವಿರೋಧ ವ್ಯಕ್ತಪಡಿಸಿದ ಘಟನಾವಳಿಗಳು ನಡೆದವು.

ಕಾರ್ಯಾಗಾರ ಆರಂಭದ ಸಮಯದಲ್ಲಿಯೇ ಶಿಕ್ಷಕರ ಸಂಘದ ಪದಾಧಿಕಾರಿಗಳು ಆಗಮಿಸಿ, ಸರ್ಕಾರದ ಕೆಲವೊಂದು ನಿಯಮಾವಳಿಗಳು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ದಾಖಲಿಸುವ ಸಲುವಾಗಿ ಇಂದಿನ ಕಾರ್ಯಾಗಾರವನ್ನು ಬಹಿಷ್ಕರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಕೆಲ ಶಿಕ್ಷಕರು ಸಹಮತ ಸೂಚಿಸಿ ಹೊರ ನಡೆದರು. ನಂತರ ಆರಂಭಗೊAಡ ಕಾರ್ಯಾಗಾರವನ್ನು ಕ್ಷೇತ್ರ ಸಮನ್ವಯಾಧಿಕಾರಿ ಹೇಮಂತ್ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಹೊಣೆ ಶಿಕ್ಷಕರ ಮೇಲಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಸೇವಾದಳದಲ್ಲಿ ಪ್ರತಿಫಲಾಫೇಕ್ಷೆಯಿಲ್ಲದೆ ಶಿಕ್ಷಕರು ಕೆಲಸ ಮಾಡಬೇಕು. ರಾಷ್ಟçಪಿತ ಮಹಾತ್ಮಗಾಂಧಿಯವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಲು ರಾಷ್ಟಿçÃಯ ಸೇವೆಗಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು, ಅವರಲ್ಲಿ ಸಂಯಮ, ಶಿಸ್ತು, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಸೇವಾ ಮನೋಭಾವ ಮೂಡಿಸುವುದು ಸೇವಾದಳದ ಪ್ರಮುಖ ಯೋಜನೆಯಾಗಿದೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷ ಕರುಂಬಯ್ಯ ವಹಿಸಿದ್ದರು. ನಂತರ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ತಾಲೂಕಿನ ಹೆಚ್ಚಿನ ಶಾಲೆಗಳಲ್ಲಿ ಸೇವಾದಳದ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ಕೋವಿಡ್ ೧೯ರ ನಂತರ ಕೆಲವು ಶಾಲೆಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲ ಶಾಲೆಗಳಲ್ಲಿ ವಾರದಲ್ಲಿ ಕೇವಲ ಒಂದು ತರಗತಿಯನ್ನು ಸೇವಾದಳ ನಡೆಸಲು ಅವಕಾಶ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.

ಕಾರ್ಯಾಗಾರದಲ್ಲಿ ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ಎಂ.ಪಿ. ಗೋಪಾಲ್, ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಸುಕುಮಾರಿ, ಸದಸ್ಯರಾದ ಮೀರ ಸುಮನ್ ಕ್ಯಾಸ್ತಲಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರದ ನೀತಿಗೆ ವಿರೋಧ : ಕಾರ್ಯಾಗಾರದಿಂದ

ಹೊರ ನಡೆದ ಶಿಕ್ಷಕರು

ಸರ್ಕಾರವು ನೂತನವಾಗಿ ಜಾರಿಗೆ ತರುತ್ತಿರುವ ಆದೇಶಗಳು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆಕ್ಷೇಪಿಸಿ, ಇದಕ್ಕೆ ಪ್ರತಿಭಟನೆ ದಾಖಲಿಸುವ ಸಲುವಾಗಿ ಕಾರ್ಯಾಗಾರದಲ್ಲಿ ಭಾಗಿಯಾಗಲು ಆಗಮಿಸಿದ್ದ ಹಲವು ಶಿಕ್ಷಕರು ಹೊರ ನಡೆದ ಘಟನೆ ನಡೆಯಿತು.

ಪ್ರಸ್ತುತ ೧ ರಿಂದ ೭ ನೇ ತರಗತಿವರೆಗಿನ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರು ಮುಂದಿನ ದಿನಗಳಲ್ಲಿ ಕೇವಲ ೫ನೇ ತರಗತಿವರೆಗೆ ಮಾತ್ರ ಬೋಧನೆ ಮಾಡಬೇಕು ಎಂಬ ಆದೇಶವನ್ನು ಒಳಗೊಂಡAತೆ ಇನ್ನಿತರ ನಿಯಮಾವಳಿಗಳು ಶಿಕ್ಷಕರ ಸೇವಾ ಜೇಷ್ಠತೆ, ಭಡ್ತಿ ಸೇರಿದಂತೆ ಇನ್ನಿತರ ಸವಲತ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲೇ ಆಕ್ಷೇಪಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಕಾರ್ಯಾಗಾರದಲ್ಲಿ ಯಾರೂ ಭಾಗಿಯಾಗಬಾರದು. ಎಲ್ಲರೂ ಬಹಿಷ್ಕಾರ ಮಾಡಬೇಕೆಂದು ಸೂಚಿಸಿದರು. ಇದಕ್ಕೆ ಹಲವಷ್ಟು ಶಿಕ್ಷಕರು ಸಹಮತಿ ಸೂಚಿಸಿ ಕಾರ್ಯಾಗಾರವನ್ನು ಬಹಿಷ್ಕರಿಸಿದರು. ಕೊನೆಯಲ್ಲಿ ಉಳಿದುಕೊಂಡ ಶಿಕ್ಷಕರಿಗೆ ಮಾತ್ರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.

ಶಿಕ್ಷಕರ ಸಂಘದ ಆದೇಶಕ್ಕೆ ವಿರೋಧ: ಈ ನಡುವೆ ಕಾರ್ಯಾಗಾರದಲ್ಲಿ ಭಾಗಿಯಾದ ಒಂದಿಷ್ಟು ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಅಧ್ಯಕ್ಷರುಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿಯೂ ಸಭೆಯಲ್ಲಿ ಹೇಳಿದರು.