ಚೆಟ್ಟಳ್ಳಿ, ಆ. ೩: ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ಒಟ್ಟು ರೂ.೨,೭೬೪.೭೭ ಲಕ್ಷಗಳ ವಹಿವಾಟು ನಡೆಸುವ ಮೂಲಕ ರೂ.೫೩.೪೨ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೧೫ರಂತೆ ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಇಂದು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೨೨-೨೩ನೇ ಸಾಲಿನಲ್ಲಿ ‘ಎ’ ತರಗತಿಯ ಒಟ್ಟು ೧೧೩೮ ಸದಸ್ಯರಿಂದ ಪಾಲು ಬಂಡವಾಳ ರೂ.೧೨೧.೬೪ ಲಕ್ಷ ಸಂಗ್ರಹವಾಗಿದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ.೨೭೩.೦೩ ಲಕ್ಷ, ನಿರಖು ಠೇವಣಿ, ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು ರೂ.೧೪೧೦.೩೩ ಲಕ್ಷ ಇದೆ. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.೪೮೫.೩೭ ಲಕ್ಷಗಳನ್ನು ಠೇವಣಿ ಮಾಡಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ ೨೦೨೨-೨೩ನೇ ಸಾಲಿನಲ್ಲಿ ರೂ.೧,೭೩೮.೨೮ ಲಕ್ಷಗಳ ಸಾಲ ಸದಸ್ಯರಿಗೆ ವಿತರಿಸಲಾಗಿದೆ ಎಂದರು.
ಸಂಘವು ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್ ಇಫ್ಕೊ, ಫ್ಯಾಕ್ಟ್, ಫ್ಯೂಚರ್ ಫರ್ಟಿಲೈಸರ್ಸ್, ಜುವಾರಿ, ಕೋರಮಂಡಲ್ ಸ್ಟೇನ್ಸ್ ಸಂಸ್ಥೆಗಳ ಸಗಟು ಮತ್ತು ರಿಟೇಲ್ ಲೈಸನ್ಸ್ ಹೊಂದಿದ್ದು, ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ೨೦೨೨-೨೩ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಮಾಗ್ರಿ ಬಾಪ್ತು ರೂ.೫೪೧.೯೪ ಲಕ್ಷಗಳ ವಹಿವಾಟು ನಡೆಸಿ ರೂ.೧೭.೧೪ ಲಕ್ಷ ವ್ಯಾಪಾರ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಚೇರಿ ಕೆಳಭಾಗದ ಅಂತಸ್ತಿನ ಮುಂಭಾಗ ಹೊಸದಾಗಿ ಬೋರ್ವೆಲ್ ತೆಗೆದು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಹಾಗೆಯೇ ರೈತ ಸದಸ್ಯರಿಗಾಗಿ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರವನ್ನು ಇಡಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಆ.೬ ರಂದು ಸಂಘದ ೪೬ನೇ ಮಹಾಸಭೆಯು ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಕೆ.ಪೂವಯ್ಯ, ನಿರ್ದೇಶಕರಾದ ಬಟ್ಟೀರ ಕೆ.ಅಪ್ಪಣ್ಣ, ಟಿ.ಎಸ್.ಧನಂಜಯ, ಪುತ್ತರೀರ ಪಿ.ನಂಜಪ್ಪ, ಪರಿಣಿತ ನಿರ್ದೇಶಕ ನೂಜಿಬೈಲು ಡಿ.ನಾಣಯ್ಯ ಹಾಜರಿದ್ದರು.