ಗೋಣಿಕೊಪ್ಪ, ಆ. ೩: ಬಿ. ಶೆಟ್ಟಿಗೇರಿ-ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ ಬೆಳೆ ಕೊಳೆರೋಗಕ್ಕೆ ತುತ್ತಾಗುತ್ತಿದ್ದು, ಸೂಕ್ತ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಕುತ್ತ್ನಾಡ್-ಬೇರಳಿನಾಡ್ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀತಿಮಾಡ ಲಾಲಾ ಭೀಮಯ್ಯ ಒತ್ತಾಯಿಸಿದ್ದಾರೆ.

ಈ ವರ್ಷ ಅವಧಿಗೆ ಮುನ್ನವೇ ಕಾಫಿಗೆ ಕೊಳೆ ರೋಗ ಬಾಧಿಸಿದೆ. ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ, ಕಂದಾಯ ಇಲಾಖೆಗಳ ಮೂಲಕ ಪರಿಹಾರ ನೀಡಲು ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎರಡು ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳಾದ ಕೊಂಗಣ, ಕುಟ್ಟಂದಿ, ಬಿ. ಶೆಟ್ಟಿಗೇರಿ, ವಿ. ಬಾಡಗ, ಕಂಡAಗಾಲ, ರುದ್ರುಗುಪ್ಪೆ, ನಾಂಗಾಲ, ಬಾಳುಗೋಡು, ಬಿಟ್ಟಂಗಾಲದಲ್ಲಿ ಹೆಚ್ಚು ನಷ್ಟ ಉಂಟಾಗಿದ್ದು, ಫಸಲು ನಷ್ಟದ ಪ್ರಮಾಣದಲ್ಲಿ ಈ ವರ್ಷ ಹೆಚ್ಚಿರುವುದರಿಂದ ಬೆಳೆಗಾರರ ಹಿತ ಕಾಯುವ ಕಾರ್ಯ ನಡೆಯಬೇಕು ಎಂದರು.

ಕಾಡಾನೆ ಹಾವಳಿಯಿಂದ ಸಾಕಷ್ಟು ಬೆಳೆ ನಷ್ಟವಾಗುತ್ತಿದೆ. ಇದರೊಂದಿಗೆ ಕೊಳೆ ರೋಗ ಉಲ್ಬಣ ಕೂಡ ಆತಂಕ ಹೆಚ್ಚಿಸಿದೆ. ಸರ್ವೆ ನಡೆಸಿ, ಕ್ರಮಕೈಗೊಳ್ಳಬೇಕು ಎಂದರು.

ಸಹ ಕಾರ್ಯದರ್ಶಿ ಮದ್ರೀರ ಗಿರೀಶ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ರಾಜ್ಯ ಅರಣ್ಯ ಸಚಿವರ ಹೇಳಿಕೆಯಿಂದ ಜಿಲ್ಲೆಯ ಕೃಷಿಕರಲ್ಲಿ ಆತಂಕ ಹೆಚ್ಚಿಸಿದೆ. ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಯೋಜನೆ ಅನುಷ್ಠಾನ ಸೂಕ್ತ. ೧೦ ಕಿ. ಮೀ. ವ್ಯಾಪ್ತಿಯಲ್ಲಿ ವರದಿ ಜಾರಿಗೆ ಮುಂದಾದರೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗುತ್ತದೆ. ವರದಿ ತಡೆಹಿಡಿಯಲು ಮುಂದಾಗಬೇಕು ಎಂದರು. ಒಕ್ಕೂಟದ ಸದಸ್ಯರಾದ ಪವಿ ಪೊನ್ನಪ್ಪ, ಕಡೇಮಾಡ ಶರತ್, ರವಿ ಕುಟ್ಟಪ್ಪ ಇದ್ದರು.