ಮಡಿಕೇರಿ, ಆ. ೨: ಪ್ರಸ್ತುತ ಜಿಲ್ಲೆಯ ಹಲವೆಡೆಗಳಲ್ಲಿ ಕಾಫಿ ಕೊಳೆ ರೋಗ ಹಾಗೂ ಉದುರುವಿಕೆ ಈಗಿನ ವಾತಾವರಣದಲ್ಲಿ ಹೆಚ್ಚಾಗುತ್ತಿದ್ದು, ಕಾಫಿ ಬೆಳೆಗಾರರು ಆತಂಕ ಎದುರಿಸು ವಂತಾಗಿದೆ.

ಈ ನಿಟ್ಟಿನಲ್ಲಿ ಆಗುತ್ತಿರುವ ನಷ್ಟದ ಅಂದಾಜು ಮಾಡಿ ಸೂಕ್ತ ಪರಿಹಾರದ ಬೇಡಿಕೆ ಬೆಳೆಗಾರರಿಂದ ವ್ಯಕ್ತಗೊಳ್ಳುತ್ತಿದೆ. ಇದೀಗ ನಷ್ಟದ ಅಂದಾಜಿಗೆ ಸರಕಾರದ ಅಧಿಕೃತ ಆದೇಶ ಹೊರಬಿದ್ದಿಲ್ಲ ವಾದರೂ ಜಿಲ್ಲಾಡಳಿತ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಯ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ತಿಳಿಸಿದ್ದಾರೆ. ಆದರೆ, ಜಂಟಿ ಸಮೀಕ್ಷೆಗೆ ಮುನ್ನ ಕಾಫಿ ಮಂಡಳಿಯ ಮೂಲಕ ಪ್ರಾಥಮಿಕ ಹಂತವಾಗಿ ಇದರ ಅಧ್ಯಯನ ನಡೆಸಲಾಗುತ್ತಿದೆ. ಕಾಫಿ ಮಂಡಳಿ ಅಧಿಕಾರಿಗಳು ಇದೀಗ ಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳಿಗೆ ಭೇಟಿ ನೀಡಿ ಕಾಫಿ ಕೊಳೆರೋಗ ಹಾಗೂ ಉದುರುವಿಕೆಯ ಕುರಿತಾಗಿ ಪರಿಶೀಲನೆ ನಡೆಸಿ ಬೆಳೆಗಾರರಿಗೂ ಸಲಹೆಯನ್ನೂ ನೀಡುತ್ತಿವೆ.

ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿ, ನಾಪೋಕ್ಲು ಹೋಬಳಿ, ಮೂರ್ನಾಡು ವಿಭಾಗ, ಶಾಂತಳ್ಳಿ, ಶನಿವಾರಸಂತೆ ಮತ್ತಿತರ ಕಡೆಗಳಲ್ಲಿ ಸಮೀಕ್ಷೆ ಆರಂಭಗೊAಡಿದೆ ಎಂದು ಕಾಫಿ ಮಂಡಳಿಯ ಸಿಬ್ಬಂದಿಗಳು ಹಾಗೂ ರೀಸರ್ಚ್ ವಿಭಾಗದವರು ವಿವಿಧ ತೋಟಗಳಿಗೆ ಭೇಟಿ ನೀಡುತ್ತಿದ್ದಾರೆ. ಗೋಣಿಕೊಪ್ಪಲು ಕಾಫಿ ಮಂಡಳಿಯ ವತಿಯಿಂದ ಪಶ್ಚಿಮಘಟ್ಟ ವಿಭಾಗದಲ್ಲಿ ಬರುವ ಶ್ರೀಮಂಗಲ ವಲಯ ವ್ಯಾಪ್ತಿಯಲ್ಲಿ ಆರಂಭಿಕವಾಗಿ ನಿನ್ನೆ ಬಿರುನಾಣಿ, ಪರಕಟಗೇರಿ, ಬಾಡಗರಕೇರಿ, ಪೊರಾಡು, ಹುದಿಕೇರಿ, ಕೋಣಗೇರಿ, ಹೈಸೊಡ್ಲೂರು ಗ್ರಾಮಗಳ ವಿವಿಧ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಈ ಸಂದರ್ಭ ಕಾಫಿ ಮಂಡಳಿಯ ಅಧಿಕಾರಿಗಳಾದ ಡಾ|| ಶ್ರೀದೇವಿ, ಸೀನಿಯರ್ ಲೈಸೆನ್ಸ್ ಆಫೀಸರ್ ಶ್ರೀರಮಣ, ವಿಜ್ಞಾನಿ ಡಾ|| ಚೇತನ್, ಎ.ಇ.ಓ ಸುನೀಲ್‌ಕುಮಾರ್ ಪಾಲ್ಗೊಂಡಿದ್ದರು.