ಕೂಡಿಗೆ, ಆ. ೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ವಾಣಿಜ್ಯ ಬೆಳೆಯಾದ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಮುಂಗಾರು ಮಳೆ ಕ್ಷೀಣವಾದರೂ, ಸಹ ಕೊಳವೆ ಬಾವಿಗಳಿಂದ ನೀರನ್ನು ಪೂರೈಕೆ ಮಾಡಿಕೊಂಡು ಶುಂಠಿ ಬೆಳೆಯನ್ನು ಈ ತಾಲೂಕು ವ್ಯಾಪ್ತಿಯ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಸಲಾಗಿದೆ. ಅದೇ ರೀತಿಯಲ್ಲಿ ಬೆಳೆಯು ಉತ್ತಮವಾಗಿ ಬೆಳೆದಿದೆ. ಆದರೆ, ಕಳೆದ ಒಂದು ವಾರದಿಂದ ಅಧಿಕವಾಗಿ ಸುರಿದ ಮಳೆಯಿಂದಾಗಿ ಶುಂಠಿ ಬೆಳೆಯಲ್ಲಿ ಕೊಳೆ ರೋಗ , ಮತ್ತು ಮಹಾಕಾಳಿ,ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಭಾಗದ ಅನೇಕ ರೈತರು ಶುಂಠಿಬೆಳೆಯನ್ನು ಕೀಳಲು ಆರಂಭ ಮಾಡಿದ್ದಾರೆ.

ಸೋಮವಾರಪೇಟೆ, ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಶುಂಠಿ ಬೆಳೆಗೆ ಹೆಚ್ಚಿನ ಆಧ್ಯತೆಯನ್ನು ರೈತರು ನೀಡಿದ್ದು, ಕಳೆದ ನಾಲ್ಕು ವರ್ಷಗಳ ಹಿಂದಿನ ಬೆಲೆಯು ಈ ಬಾರಿ ರೈತರಿಗೆ ದೊರಕುತ್ತಿದೆ. ಈ ಬಾರಿ ಶುಂಠಿ ಬೆಳೆಯು ೬೦ ಕೆ.ಜಿ. ತೂಕಕ್ಕೆ ೫,೨೦೦ ರೂ. ನಂತೆ ಮಾರಾಟವಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮವಾದ ಬೆಲೆ ಸಿಗುತ್ತಿದೆ ಎಂದು ಶುಂಠಿ ಬೆಳೆಗಾರರಾದ ಪುಟ್ಟರಾಜ, ನಾಗರಾಗ್ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಸೀಗೆಹೊಸೂರು ಭುವನಗಿರಿ ತೊರೆನೂರು ಶಿರಂಗಾಲ ಹೆಬ್ಬಾಲೆ ಅಳುವಾರ ಬಾಣವಾರ, ಸಿದ್ಧಲಿಂಗಪುರ, ವ್ಯಾಪ್ತಿಯಲ್ಲಿ ಹೆಚ್ಚಾಗಿ ಅರೆ ಮಲೆನಾಡು ಪ್ರದೇಶವಾದರೂ ಸಹ ಶುಂಠಿ ಬೆಳೆಯು ಉತ್ತಮವಾಗಿ ಬೆಳೆದಿದೆ, ಶುಂಠಿ ಬಿತ್ತನೆ ಮಾಡಿ ಈಗಾಗಲೇ ೫ ತಿಂಗಳುಗಳು ಕಳೆಯುತ್ತಾ ಬಂದಿದೆ ಶುಂಠಿಯ ಗೆಡ್ಡೆಯು ಸಾಧಾರಣ ಮಟ್ಟದಲ್ಲಿ ಕಟ್ಟಿದೆ.