ಗೋಣಿಕೊಪ್ಪಲು, ಆ. ೧: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕೇರಳ ಸೇರಿದಂತೆ ಇನ್ನಿತರ ಭಾಗಗಳಿಂದ ವಾಹನಗಳಲ್ಲಿ ತರಕಾರಿ, ಹಣ್ಣು ಹಂಪಲು, ದಿನಸಿ ವಸ್ತುಗಳನ್ನು ವಾಹನದಲ್ಲಿಟ್ಟುಕೊಂಡು ಬಸ್ ನಿಲ್ದಾಣದಲ್ಲಿ ಹಾಗೂ ಮುಖ್ಯ ರಸ್ತೆಯ ವಾಹನ ನಿಲುಗಡೆ ಪ್ರದೇಶದಲ್ಲಿ ವ್ಯಾಪಾರ ಮಾಡುವ ಮೂಲಕ ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಂತಹ ವಾಹನಗಳನ್ನು ತೆಗೆಸಿ ವಾಹನದ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಗೋಣಿಕೊಪ್ಪ ನಗರವು ಸದಾ ಜನ ಜಂಗುಳಿಯಿAದ ಕೂಡಿದ್ದು ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸಿದರೂ ಉತ್ತಮ ಆದಾಯ ಬರುತ್ತದೆ. ಇದರಿಂದ ಹೊರ ರಾಜ್ಯ ಜಿಲ್ಲೆಯಿಂದ ವ್ಯಾಪಾರಿಗಳು ಪ್ರತಿನಿತ್ಯ ವಾಹನಗಳಲ್ಲಿ ಸಾಮಗ್ರಿಗಳನ್ನು ತಂದು ಬಸ್ ನಿಲ್ದಾಣ ಹಾಗೂ ಆಸುಪಾಸಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ವ್ಯಾಪಾರವನ್ನು ಮಾಡುತ್ತಿರುತ್ತಾರೆ. ಆದರೆ ಈ ವಾಹನಗಳನ್ನು ತೆರವುಗೊಳಿಸಿ ಸುಗಮ ಪಾರ್ಕಿಂಗ್ ವ್ಯವಸ್ಥೆ ಒದಗಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬದು ನಾಗರಿಕರ ಅಸಮಾಧಾನ. ಬಸ್ ನಿಲ್ದಾಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಿಲುಗಡೆಗೊಳಿಸಲು ಸ್ಥಳಾವಕಾಶ ಕಡಿಮೆಯಿದ್ದರೂ ನಿಲ್ದಾಣಗಳಲ್ಲಿಯೇ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿವೆ. ಇದರಿಂದ ನಿಲ್ದಾಣಕ್ಕೆ ಬಸ್‌ಗಳು ಆಗಮಿಸಿದ ವೇಳೆ ತೊಂದರೆ ಎದುರಾಗುತ್ತಿದೆ.

ಪಟ್ಟಣದಿಂದ ಅರುವತ್ತೋಕ್ಕಲು ಮಾರ್ಗವಾಗಿ ತೆರಳಲು ಏಕಮುಖ ಸಂಚಾರವಿದ್ದರೂ ಇಲ್ಲಿ ತನಕ ಇದರ ನಿರ್ವಹಣೆಯನ್ನು ಪೊಲೀಸರು ಮಾಡುತ್ತಿಲ್ಲ. ಈ ರಸ್ತೆಯ ಎರಡು ಬದಿಯಲ್ಲಿಯೂ ಸ್ಕೂಟರ್‌ಗಳು, ಬೈಕ್‌ಗಳು ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಮುಂಜಾನೆ ೯ ಗಂಟೆಯಿAದ ನಗರದ ಪೊನ್ನಂಪೇಟೆ ರಸ್ತೆ ಜಂಕ್ಷನ್ ಹಾಗೂ ಬಸ್ ನಿಲ್ದಾಣದ ಬಳಿ ಶಾಲಾ ಬಸ್ಸುಗಳ ಓಡಾಟ ಹೆಚ್ಚಾಗಿರುತ್ತವೆ. ಆದರೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರು ನಿಗದಿತ ಸಮಯಕ್ಕೆ ಆಗಮಿಸುತ್ತಿಲ್ಲ. ಇದರಿಂದ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿದೆ. ಸಾರ್ವಜನಿಕರ ವಾಹನ ನಿಲುಗಡೆ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಆಟೋ ರಿಕ್ಷಾಗಳು ನಿಲುಗಡೆಯಾಗುತ್ತಿವೆ. ಆಟೋ ರಿಕ್ಷಾಗಳಿಗೆ ತಮ್ಮದೆ ಆದ ನಿಲ್ದಾಣವಿದ್ದರೂ ಸಾರ್ವಜನಿಕರ ಪಾರ್ಕಿಂಗ್ ಸ್ಥಳವನ್ನು ಅತಿಕ್ರಮಣ ಮಾಡಿಕೊಳ್ಳುತ್ತಿವೆ.

ಸರ್ಕಾರಿ ಬಸ್ಸುಗಳು ಮೈಸೂರು ಭಾಗದಿಂದ ನಗರಕ್ಕೆ ಆಗಮಿಸಿದ ವೇಳೆ ಆಟೋ ರಿಕ್ಷಾ ಚಾಲಕರು ಬಾಡಿಗೆ ತೆರಳಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತಾರೆ. ಪೊನ್ನಂಪೇಟೆ ಚೆಸ್ಕಾಂ ಕಚೇರಿಯ ಮುಂದೆ ಸಾರ್ವಜನಿಕ ವಾಹನ ಪಾರ್ಕಿಂಗ್ ಸ್ಥಳವನ್ನು ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ.

ತಮ್ಮ ದಿನನಿತ್ಯದ ವ್ಯಾಪಾರವನ್ನು ಮುಂದುವರೆಸುತ್ತಿದ್ದಾರೆ. ಸಂತ ಥೋಮಸ್ ಶಾಲೆಗೆ ತೆರಳುವ ರಸ್ತೆಯ ಬದಿಯಲ್ಲಿಯೇ ವಾಹನದಲ್ಲಿ ಹಣ್ಣು ಹಂಪಲುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಶಾಲೆಗೆ ಮಕ್ಕಳನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುವ ಹಾಗೂ ಬರುವ ಸಮಯದಲ್ಲಿ ತೀವ್ರ ಅಡ್ಡಿಯಾಗುತ್ತಿದೆ. ಅಲ್ಲದೆ ಪೊನ್ನಂಪೇಟೆ ನಗರದಿಂದ ಬರುವ ವಾಹನಗಳಿಗೂ ಸಮಸ್ಯೆ ಎದುರಾಗುತ್ತಿದೆ. ಪಾರ್ಕಿಂಗ್ ಸ್ಥಳದಲ್ಲಿ ವ್ಯಾಪಾರ ವಹಿವಾಟಿಗೆ ನಿರ್ಬಂಧವಿದ್ದು ಪೊಲೀಸರ ಬಿಗಿ ಕ್ರಮಕ್ಕೆ ನಾಗರಿಕರು ಆಗ್ರಹಿಸಿದ್ದಾರೆ.

- ಹೆಚ್.ಕೆ. ಜಗದೀಶ್