ಮಡಿಕೇರಿ, ಆ. ೧: ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಒಂದಾದ ಪುಟ್ಟ ಜಿಲ್ಲೆ ಕೊಡಗು. ಮಳೆ ಇಲ್ಲಿನ ಜನರ ಜೀವನದ ಒಂದು ಭಾಗವಾಗಿದೆ. ಮಳೆಗಾಲ ಬಂದರೆ ಸಾಕು ಜಿಲ್ಲೆಯ ಜನರಲ್ಲಿ ಉತ್ಸಾಹ ಇರುತ್ತಿತ್ತು. ಮುಂಗಾರು ಮಳೆಯನ್ನು ಕೊಡಗಿನ ಜನತೆ ಎಂಜಾಯ್ ಮಾಡುತ್ತಾರೆ.

ಕೊಡಗಿನಲ್ಲಿ ಸುರಿಯುವ ಮುಂಗಾರು ಮಳೆಯ ಸೊಬಗನ್ನು ಆನಂದಿಸಲು ಮಳೆಗಾಲದಲ್ಲೂ ಕೂಡ ಸಾವಿರಾರು ಪ್ರವಾಸಿಗರು ಕೂಡ ಜಿಲ್ಲೆಗೆ ಬರುತ್ತಾರೆ.

ಆದರೆ ೨೦೧೮ ರಿಂದೀಚೆಗೆ ಕೊಡಗು ಜಿಲ್ಲೆಯ ಜನರಿಗೆ ಮಳೆಗಾಲ ಬಂತೆAದರೆ ಭೂಕುಸಿತ, ಪ್ರಕೃತಿ ವಿಕೋಪ, ಪ್ರವಾಹದ ಭೀತಿ ಎದುರಾಗುತ್ತದೆ. ನದಿ ಪಾತ್ರದ ಜನರು ಮಳೆಗಾಲ ಸಮೀಪಿಸುತ್ತಿದ್ದಂತೆ ಮನೆಗಳನ್ನು ಖಾಲಿ ಮಾಡಿ ಇತರೆಡೆ ಆಶ್ರಯ ಪಡೆಯುವಂತಾಗಿದೆ.

೨೦೧೮ ಆಗಸ್ಟ್ ೧೫ರ ಮಧ್ಯರಾತ್ರಿ ಸುರಿದ ಆಶ್ಲೇಷ ಮಳೆಯಿಂದ ಕೊಡಗಿನ ಮಡಿಕೇರಿ ಹಾಗೂ ಸೋಮವಾರಪೇಟೆ ಭಾಗದಲ್ಲಿ ಭೂಕುಸಿತಗೊಂಡು ಇಡೀ ಗ್ರಾಮಕ್ಕೆ ಗ್ರಾಮವೇ ಮಾಯವಾಗಿತ್ತು. ಮನೆಗಳು, ತೋಟಗಳು ಮಣ್ಣುಪಾಲಾಗಿತ್ತು.

ರಾತ್ರಿ ಮಲಗಿ, ಬೆಳಿಗ್ಗೆ ಏಳುವಷ್ಟರಲ್ಲಿ ಮಳೆಯಿಂದಾಗಿ ಇಡೀ ಚಿತ್ರಣವೇ ಬದಲಾಗಿತ್ತು. ೨೦೧೮ರಲ್ಲಿ ಆಶ್ಲೇಷ ಮಳೆಯ ರೌದ್ರನರ್ತನದಿಂದ ಕುಶಾಲನಗರ, ಮಡಿಕೇರಿ ಹಾಗೂ ಸೋಮವಾರಪೇಟೆ ಭಾಗದಲ್ಲಿ ಸಾವಿರಾರು ನಿರಾಶ್ರಿತರು ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಸಾವಿರಾರು ಕುಟುಂಬಗಳು ಮಳೆಯಿಂದಾಗಿ ಬೀದಿಪಾಲಾಗಿದ್ದರು. ಭೂಕುಸಿತದಿಂದಾಗಿ ೧೯ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಜೋಡುಪಾಲದಲ್ಲಿ ಭೂಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ಹೆಣ್ಣು ಮಗಳೊಬ್ಬಳ ಮೃತದೇಹ ಪತ್ತೆಯಾಗಿಯೇ ಇಲ್ಲ. ೨೦೧೮ರಿಂದ ಕೊಡಗಿನ ಜನತೆಗೆ ಮಳೆಗಾಲ ಕಾಲಿಟ್ಟರೆ ಆವೃತ್ತ ಭಯ ಕಾಡುತ್ತದೆ.

೨೦೧೮ರಲ್ಲಿ ಉತ್ತರ ಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಿಸಿದರೆ, ೨೦೧೯ರ ಆಗಸ್ಟ್ನಲ್ಲಿ ಆಶ್ಲೇಷ ಮಳೆಯು ದಕ್ಷಿಣ ಕೊಡಗಿನಲ್ಲಿ ತಲ್ಲಣ ಸೃಷ್ಟಿಸುತ್ತಾ ಸಾವಿರಾರು ಕುಟುಂಬಗಳು ತಿಂಗಳುಗಟ್ಟಲೆ ಕಾಳಜಿ ಕೇಂದ್ರದಲ್ಲಿ ದಿನದೂಡಿದ್ದರು. ಕಾವೇರಿ ನದಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಇಂದಿಗೂ ಕೂಡ ಸೂರು ಸಿಕ್ಕಿಲ್ಲ.

೨೦೧೯ರ ಆಗಸ್ಟ್ನಲ್ಲಿ ಸುರಿದ ಆಶ್ಲೇಷ ಮಳೆಯ ಆರ್ಭಟಕ್ಕೆ ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ೧೦ ಹತ್ತು ಜನ ಮೃತಪಟ್ಟಿದ್ದರು.

ತಾಯಿ, ಮಗಳು ಕೂಡ ಭೂಕುಸಿತಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದರು ಹಾಗೂ ಮಡಿಕೇರಿ ತಾಲೂಕಿನ ಕೋರಂಗಾಲದಲ್ಲಿ ಐವರು ಸೇರಿ ೧೫ ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇವೆಲ್ಲವೂ ಜಿಲ್ಲೆ ಮರೆಯಲಾಗದಂತಹ ಕಹಿ ನೆನಪುಗಳು.

೨೦೧೯ರಲ್ಲಿ ಆಶ್ಲೇಷ ಮಳೆಯಿಂದಾಗಿ ನೆಲ್ಲಿಹುದಿಕೇರಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಕೊಂಡAಗೇರಿ ಗ್ರಾಮದಲ್ಲಿ ಸಾವಿರಾರು ಮನೆಗಳು ಕಾವೇರಿ ನದಿಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿತ್ತು.

೨೦೨೦ ಆಗಸ್ಟ್ನಲ್ಲಿ ಕೂಡಾ ಆಶ್ಲೇಷ ಮಳೆಯ ಆರ್ಭಟ ಮುಂದುವರೆದಿತ್ತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ತಲಕಾವೇರಿ ಕ್ಷೇತ್ರದ ಅರ್ಚಕ ಕುಟುಂಬ ಸೇರಿ ಐವರು ಸಾವನ್ನಪ್ಪಿದ್ದರು. ಇಂತಹ ದುರಂತಗಳ ಸರಮಾಲೆ ಜಿಲ್ಲೆಯ ಜನರಿಗೆ ಭಯ ಹುಟ್ಟಿಸಿದಂತಾಗಿದೆ.

ಆಶ್ಲೇಷ ಮಳೆಯ ಭಯ!

೨೦೧೮ ರಿಂದ ೨೦೨೦ ವರೆಗೆ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಆಶ್ಲೇಷ ಮಳೆಗೆ ಇಡೀ ಕೊಡಗಿನ ಜನತೆ ಬೆಚ್ಚಿ ಬಿದ್ದಿದ್ದಾರೆ.

ಆಗಸ್ಟ್ ತಿಂಗಳು ಬಂದರೆ ಸಾಕು ಕರಾಳ ದಿನಗಳು ಕಣ್ಣಮುಂದೆ ಬರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಯಾವುದೇ ಅನಾಹುತಗಳನ್ನು ಸಂಭವಿಸಿಲ್ಲ ಎಂಬುದು ತುಸು ನೆಮ್ಮದಿಯ ವಿಚಾರ.

ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೈ ಕೊಡುತ್ತಿದೆ.

ಭತ್ತ ಬಿತ್ತನೆ ಮಾಡಲು ಕೂಡ ನೀರಿಲ್ಲದ ಪರಿಸ್ಥಿತಿಯಲ್ಲಿ ಬೆಳೆಗಾರರು ಇದ್ದರು. ಜುಲೈ ತಿಂಗಳ ಆರಂಭದಲ್ಲೇ ಅಬ್ಬರಿಸದ ವರುಣ ಜುಲೈ ಕೊನೆಯಲ್ಲಿ ಅಬ್ಬರಿಸಿದೆ. ಕಳೆದ ಐದು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜಲಪ್ರವಾಹ ಎದುರಾಗಿತ್ತು.

ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿದು ನದಿ, ತೊರೆಗಳು ಮೈ ತುಂಬಿ ಹರಿಯುತ್ತಿತ್ತು. ಇದೀಗ ಮತ್ತೆ ಮಳೆ ಇಳಿಮುಖವಾದಂತಿದೆ.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆ ಇದ್ದರೂ ಕೂಡ, ಒಂದು ವಾರಗಳ ಕಾಲ ಎಡೆಬಿಡದೆ ಸುರಿದ ಮಳೆರಾಯನಿಗೆ ಜಿಲ್ಲೆಯ ಜನತೆ ನಡುಗಿದ್ದಾರೆ. ಆಗಸ್ಟ್ ೩ ರಿಂದ ಆಶ್ಲೇಷ ಮಳೆಯು ಶುರುವಾಗಲಿದೆ. ಇದೀಗ ಜಿಲ್ಲೆಯ ಜನರಲ್ಲಿ ಪ್ರತೀ ವರ್ಷದಂತೆ ಈ ಬಾರಿ ಕೂಡ ಆಗಸ್ಟ್ ತಿಂಗಳ ಭಯ ಕಾಡುತ್ತಿದೆ. ಕೊಡಗಿನಲ್ಲಿ ಈ ಬಾರಿ ಆಶ್ಲೇಷ ಮಳೆಯೂ ಅನಾಹುತಗಳನ್ನು ಉಂಟುಮಾಡದಿರಲಿ ಎಂಬುದು ಜನರ ಆಶಯವಾಗಿದೆ. - ಕೆ.ಎಂ ಇಸ್ಮಾಯಿಲ್ ಕಂಡಕರೆ.