ಕುಶಾಲನಗರ, ಆ. ೧: ಕಳೆದ ಕೆಲವು ದಿನಗಳಿಂದ ಮಳೆ ಪ್ರಮಾಣ ಕ್ಷೀಣಿಸಿದ ಕಾರಣ ಹಾರಂಗಿ ಜಲಾಶಯಕ್ಕೆ ಒಳಹರಿವು ಬಹುತೇಕ ಕಡಿಮೆಯಾಗಿದೆ. ಈ ಸಾಲಿನಲ್ಲಿ ಹಾರಂಗಿ ಜಲಾಶಯಕ್ಕೆ ಇದುವರೆಗೆ ೧೪.೪೧ ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ ೨೮೫೭.೫೧ ಅಡಿಗಳಾಗಿವೆ.

(ಮೊದಲ ಪುಟದಿಂದ) ಜಲಾಶಯದಲ್ಲಿ ಪ್ರಸ್ತುತ ೭.೯೯ ಟಿಎಂಸಿ ನೀರಿನ ಸಂಗ್ರಹ ಇದೆ.

ಅಣೆಕಟ್ಟಿನಿಂದ ನದಿಗೆ ೮.೮೧ ಟಿಎಂಸಿ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ಕಾಲುವೆ ಮೂಲಕ ೦.೦೮೯ ಟಿಎಂಸಿ ನೀರನ್ನು ಬಿಡಲಾಗಿದೆ. ಪ್ರಸಕ್ತ ಜಲಾಶಯಕ್ಕೆ ೩,೯೪೨ ಕ್ಯುಸೆಕ್ಸ್ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಗೆ ೨,೫೪೧ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಬಿ ಜೆ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕೂಡ ನೀರಿನ ಹರಿವು ಬಹುತೇಕ ಇಳಿಕೆ ಆಗಿದೆ. ಕಳೆದ ಒಂದು ವಾರದ ಹಿಂದೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಇದೀಗ ಕೇವಲ ೧.೫ ಮೀಟರ್ ಎತ್ತರದ ಪ್ರಮಾಣದಲ್ಲಿ ನೀರಿನ ಹರಿವು ಗೋಚರಿಸಿದೆ.

- ಸಿಂಚು