ಸೋಮವಾರಪೇಟೆ, ಜು. ೩೦: ಕಳೆದ ೧೦ ದಿನಗಳಿಂದ ಆರ್ಭಟಿಸಿದ ಮಳೆಗೆ ಸೋಮವಾರಪೇಟೆ ತಾಲೂಕಿನಾದ್ಯಂತ ಈವರೆಗೆ ಒಟ್ಟು ೨೮ ಮನೆಗಳಿಗೆ ಹಾನಿ ಸಂಭವಿಸಿದ್ದರೆ, ಪ್ರಸಕ್ತ ಮುಂಗಾರಿನ ಸಾಲಿನಲ್ಲಿ ಸಿಡಿಲಿನಾರ್ಭಟಕ್ಕೆ ಒಂದು ಮಾನವ ಜೀವ ಹಾನಿಯಾಗಿದೆ. ವಾತಾವರಣದಲ್ಲಿನ ಅತೀ ಶೀತಕ್ಕೆ ಈವರೆಗೆ ೫ ಜಾನುವಾರುಗಳು ಸಾವನ್ನಪ್ಪಿವೆ. ಸೋಮವಾರಪೇಟೆ ಕಸಬಾ ಸೇರಿದಂತೆ ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅತೀ ಶೀತದಿಂದ ಮನೆಯ ಗೋಡೆಗಳು ಕುಸಿದಿರುವುದು, ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿರುವುದು, ಗಾಳಿಗೆ ಛಾವಣಿ ಜಖಂಗೊAಡಿ ರುವ ಪ್ರಕರಣಗಳು ವರದಿಯಾಗಿವೆ.

ತಾಲೂಕಿನಲ್ಲಿ ಪ್ರಸಕ್ತ ಮುಂಗಾರಿನಲ್ಲಿ ೨೮ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಗೆ ವರದಿಯಾಗಿದ್ದು, ಇದರಲ್ಲಿ ೯ ಅಧಿಕೃತ ಮನೆಗಳಾಗಿದ್ದರೆ, ಉಳಿದ ೧೯ ಮನೆಗಳು ಅನಧಿಕೃತ ಮನೆಗಳಾಗಿವೆ. ಅಧಿಕೃತ ಮನೆಗಳಿಗೆ ಈಗಾಗಲೇ ಪ್ರಾಥಮಿಕ ಹಂತದ ಪರಿಹಾರವಾಗಿ ಮಳೆಹಾನಿ ಪರಿಹಾರ ನಿಧಿಯಡಿ ತಾಲೂಕು ತಹಶೀಲ್ದಾರ್ ಮೂಲಕ ೨.೮ ಲಕ್ಷ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಒಂದೆರಡು ದಿನದಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಯಾಗಲಿದೆ ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ್ ತಿಳಿಸಿದ್ದಾರೆ.

ಮನೆ ಹಾನಿಯಾದ ೨೮ ಪ್ರಕರಣಗಳ ಪೈಕಿ ೧೦ ಪ್ರಕರಣಗಳಿಗೆ ಸಂಬAಧಿಸಿದAತೆ ಫಲಾನುಭವಿಗಳ ಅರ್ಜಿ, ಕಂದಾಯ ನಿರೀಕ್ಷಕರ ವರದಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವರದಿ ಸಲ್ಲಿಕೆಯಾಗಿದ್ದು, ಸಂಪೂರ್ಣ ದಾಖಲಾತಿಗಳು ಈಗಾಗಲೇ ತಾಲೂಕು ಕಚೇರಿಗೆ ಬಂದಿವೆ. ೧೮ ಪ್ರಕರಣಗಳ ಪೈಕಿ ೧೬ಕ್ಕೆ ಕಂದಾಯ ನಿರೀಕ್ಷಕರ ವರದಿ ಸಿದ್ಧವಾಗಿದ್ದು, ೨ ಬಾಕಿಯಿವೆ. ಇದು ಪೂರ್ಣಗೊಂಡ ನಂತರ ಲೋಕೋಪಯೋಗಿ ಇಲಾಖೆಯ ವರದಿಗಳು ಬರಬೇಕಿವೆ. ಮನೆಗಳಿಗೆ ಪ್ರಾಥಮಿಕ ಪರಿಹಾರವಾಗಿ ಈಗಾಗಲೇ ೨.೮ ಲಕ್ಷ ಪರಿಹಾರ ಹಣ ಬಿಡುಗಡೆಗೆ ಸಿದ್ದವಾಗಿದ್ದು, ಗರಿಷ್ಠ ಪ್ರಮಾಣದ ಪರಿಹಾರ ಪಡೆಯಬೇಕಿದ್ದರೆ ಆರ್.ಜಿ.ಹೆಚ್.ಸಿ.ಎಲ್. (ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್)ಗೆ ಮಾಹಿತಿಗಳನ್ನು ನಮೂದಿಸಬೇಕಿದೆ. ಪ್ರಸ್ತುತ ಆರ್.ಜಿ.ಹೆಚ್.ಸಿ.ಎಲ್. ನಡಿ ನಮೂದಿಸಲು ವೆಬ್‌ಸೈಟ್ ತೆರೆದಿಲ್ಲ ಎಂದು ತಾಲೂಕು ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ವಾತಾವರಣದಲ್ಲಿ ಅತೀ ಶೀತ ಉಂಟಾಗಿ ಒಟ್ಟು ೫ ಜಾನುವಾರುಗಳು ಸಾವನ್ನಪ್ಪಿವೆ. ಇದರಲ್ಲಿ ೨ ಪ್ರಕರಣಗಳಿಗೆ ಈಗಾಗಲೇ ೩೦ ಹಾಗೂ ೩೫ ಸಾವಿರದಂತೆ ಒಟ್ಟು ೬೫ ಸಾವಿರ ಪರಿಹಾರ ವಿತರಣೆ ಮಾಡಲಾಗಿದೆ. ಉಳಿದ ೨ ಪ್ರಕರಣಗಳ ಅರ್ಜಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆಯ ಹಂತದಲ್ಲಿದ್ದು, ಉಳಿದ ೧ ಪ್ರಕರಣದಲ್ಲಿ ಕಂದಾಯ ನಿರೀಕ್ಷಕರಿಂದ ತಾಲೂಕು ಕಚೇರಿಗೆ ವರದಿ ಸಲ್ಲಿಕೆಯಾಗಬೇಕಿದೆ. ಪ್ರಸಕ್ತ ವರ್ಷದ ಮಳೆಗಾಲದ ಆರಂಭದಲ್ಲಿ ಉಂಟಾದ ಸಿಡಿಲಿನಾರ್ಭಟಕ್ಕೆ ಮಾದಾಪುರ ಸಮೀಪದ ಮೂವತ್ತೊಕ್ಲು ಗ್ರಾಮದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದು, ಕುಟುಂಬಕ್ಕೆ ಈಗಾಗಲೇ ೫ ಲಕ್ಷ ರೂಪಾಯಿ ಪರಿಹಾರವನ್ನು ಒದಗಿಸಲಾಗಿದೆ. ಒಟ್ಟಾರೆ ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಈವರೆಗೆ ೨೮ ಮನೆಗಳು ಹಾನಿಗೀಡಾಗಿದ್ದರೆ, ೫ ಜಾನುವಾರು, ೧ ಮಾನವ ಪ್ರಾಣ ಹಾನಿಯಾಗಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಹಾನಿಗೀಡಾದ ಸ್ಥಳಗಳಿಗೆ ತಾಲೂಕು ತಹಶೀಲ್ದಾರ್, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಿದ್ದಾರೆ.

- ವಿಜಯ್ ಹಾನಗಲ್