ವೀರಾಜಪೇಟೆ, ಜು. ೩೦: ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಾಧಾರಣ ವಿಚಾರವಲ್ಲ. ಜಾಗತೀಕರಣದ ನಡುವೆ ಸ್ಪರ್ಧೆ ಅಧಿಕವಾಗಿದೆ. ಹಾಗಾಗಿ ನಾವು ಮಕ್ಕಳಿಗೆ ಅತ್ಯುನ್ನತ ಶಿಕ್ಷಣವನ್ನು ನೀಡ ಬೇಕಿದೆ ಎಂದು ವೀರಾಜ ಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ-ಕಳಂಚೇರಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರೇ ಹೊಟ್ಟೆಪಾಡನ್ನು ನೋಡಿಕೊಳ್ಳುವ ಶಿಕ್ಷಣ ಕೊಡುವುದಕ್ಕಿಂತ ಶಿಕ್ಷಣ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ನೆರವಾಗುವಂತಹ ಶಿಕ್ಷಣ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಅರಮೇರಿ-ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಅವರ ಸಂಕಷ್ಟದ ಸಮಯದಲ್ಲಿ ಸ್ಪಂದಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿ ಶಾಸಕ ಸ್ಥಾನವನ್ನು ಅಲಂಕರಿಸಿರುವುದು ಶ್ಲಾಘನೀಯ. ಪೊನ್ನಣ್ಣನವರು ರಾಜ್ಯದಲ್ಲಿ ಯಶಸ್ವಿ ವಕೀಲರಾಗಿದ್ದರೂ ತಂದೆಯAತೆಯೇ ಜನರ ಸೇವೆಗಾಗಿ ರಾಜಕೀಯ ರಂಗಕ್ಕೆ ಬಂದು ತಮ್ಮ ಛಾಪು ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಕಾರ್ಯಕ್ರಮಕ್ಕೆ ಶಾಸಕರನ್ನು ಅರಮೇರಿ-ಕಳಂಚೇರಿ ಮಠದ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ಮೂಲಕ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು. ಎಸ್.ಎಂ.ಎಸ್. ವಿದ್ಯಾಪೀಠದ ಪ್ರಾಂಶುಪಾಲೆ ಕುಸುಮ್ ಸೇರಿದಂತೆ ಕಾಲೇಜು ಉಪನ್ಯಾಸಕರು, ಶಾಲೆ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.