(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜು.೩೦: ಒಂದೆಡೆ ಮಳೆ ಕಾಟ ಇನ್ನೊಂದೆಡೆ ಕಾಡಾನೆ ಹಾಗೂ ವನ್ಯ ಜೀವಿಗಳ ಉಪಟಳ ಇವುಗಳ ನಡುವೆ ಅನ್ನದಾತನ ಗೋಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಗೆ ಬಂದ ಫಸಲು ಮನೆಗೆ ತಲುಪುತ್ತಿಲ್ಲ. ಕೊಡಗಿನಲ್ಲಿ ಮಳೆ ಆರಂಭವಾಗಿ ವಾರ ಕಳೆಯುತ್ತಿದ್ದಂತೆ ಕಾಫಿ ತೋಟದಲ್ಲಿ ಫಸಲು ಭರಿತ ಕಾಫಿ ಒಂದೇ ಸಮನೆ ಉದುರ ಲಾರಂಭಿಸಿವೆ. ಇನ್ನೂ ಮಳೆ ಮುಂದುವರೆಯುವ ಲಕ್ಷಣಗಳಿದ್ದು, ಈಗಲೇ ಹೀಗಾದರೆ ಮುಂದಿನ ಪರಿಸ್ಥಿತಿ ಏನಾಗಬಹುದೆಂದು ರೈತ ಕಂಗಾಲಾಗಿದ್ದಾನೆ.

ಕಾಫಿ ತೋಟದಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ನಿರಂತರ ನಷ್ಟ ಅನುಭವಿಸುತ್ತಿರುವ ಬಹುತೇಕ ಬೆಳೆಗಾರರಿಗೆ ಇದೀಗ ಪ್ರಮುಖ ಬೆಳೆಯಾದ ಕಾಫಿ ಬೆಳೆಗೆ ಕೊಳೆರೋಗ ಬಾಧೆ ಕಂಡು ಬಂದಿದೆ. ಇದರಿಂದಾಗಿ ರೈತರ ತೋಟದಲ್ಲಿ ಕಾಫಿ ಹಣ್ಣುಗಳು ನೆಲಕ್ಕುರುಳುತ್ತಿವೆ. ದಕ್ಷಿಣ ಕೊಡಗಿ ನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಮಸ್ಯೆ ಉಲ್ಬಣವಾಗಿದೆ.

ರೈತನಿಗೆ ವಾರ್ಷಿಕ ಬೆಳೆಯಾಗಿ ಸಿಗುತ್ತಿರುವ ಕಾಫಿ ಬೆಳೆಯನ್ನು ನಂಬಿ ಬ್ಯಾಂಕ್‌ಗಳಲ್ಲಿ ಸಾಕಷ್ಟು ರೈತರು ಸಾಲ ಪಡೆದಿದ್ದಾರೆ. ಪಡೆದ ಸಾಲವನ್ನು ಬೆಳೆಗಳಿಗೆ ವ್ಯಯ ಮಾಡಿದ್ದಾರೆ. ವಾರ್ಷಿಕವಾಗಿ ಬ್ಯಾಂಕ್‌ಗಳಿAದ ಪಡೆಯುವ ಸಾಲವನ್ನು ಮರುಪಾವತಿಸಲು ಕಾಫಿಯನ್ನು ಉಳಿಸಿಕೊಳ್ಳ ಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಇಲ್ಲಿನ ರೈತರು ಸಿಲುಕಿದ್ದಾರೆ. ಆದರೆ ಇದೀಗ ಕೊಳೆ ರೋಗದಿಂದ ಕಾಫಿ ಉದುರು ತ್ತಿರುವುದರಿಂದ ನಂಬಿದ್ದ ಕಾಫಿ ಫಸಲು ಕೈ ಸೇರುವುದು ಅನುಮಾನವಾಗಿದೆ.

ಕಾಫಿ ಮಂಡಳಿ ಪರಿಶೀಲಿಸಲಿ

ಇತ್ತೀಚೆಗೆ ಮಳೆ ಸುರಿಯಲಾರಂಭಿಸಿದೆ. ಮುಂದೆ ಸಾಕಷ್ಟು ಮಳೆ ಆಗುವ ಸಂಭವವಿದೆ. ಈಗಲೇ ತೋಟದಲ್ಲಿರುವ ಕಾಫಿ ಒಂದೇ ಸಮನೆ ಉದುರಲಾರಂಭಿಸಿವೆ. ಮುಂದೆ ಇನ್ನಷ್ಟು ಕಾಫಿ ಉದುರುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಕಾಫಿ ಮಂಡಳಿ ಮುಂದೆ ಬರಬೇಕು. ಸಮಸ್ಯೆ ಇಷ್ಟು ಉಲ್ಬಣವಾಗಿದ್ದರೂ ಇಲ್ಲಿಯ ತನಕ ಕಾಫಿ ಮಂಡಳಿ ರೈತರ ತೋಟಗಳಿಗೆ ಭೇಟಿ ನೀಡಿಲ್ಲ. ಕೊಳೆ ರೋಗ ಕಾಣಿಸಿಕೊಂಡಿರುವ ರೈತರಿಗೆ ಕಾಫಿ ಮಂಡಳಿಯಿAದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. -ನೆಲ್ಲೀರ ಪೊನ್ನಪ್ಪ, ಕಾಫಿ ಬೆಳೆಗಾರರು, ಹೈಸೊಡ್ಲೂರು