ಮಡಿಕೇರಿ, ಜು. ೩೦: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾಗೊಳಿಸಲು ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಹಾಗೂ ಅಡಿಕೆ ಬೆಳೆಗೆ ವಿಮಾ ಘಟಕ ಅಧಿಸೂಚಿಸಲಾಗಿದೆ. ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಮತ್ತಿತರ ಮಾಹಿತಿಯನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ. ೨೦೨೩-೨೪ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಕಾಳುಮೆಣಸು ಬೆಳೆಗೆ ಒಟ್ಟು ರೂ. ೪೭ ಸಾವಿರ ಹಾಗೂ ಅಡಿಕೆ ಬೆಳೆಗೆ ರೂ. ೧,೨೮,೦೦೦ ಆಗಿರುತ್ತದೆ. ವಿಮಾ ಕಂಪೆನಿಗೆ ಒಟ್ಟು ವಿಮಾ ಮೊತ್ತಕ್ಕೆ ರೈತರು ಕಾಳುಮೆಣಸು ಬೆಳೆಗೆ ಶೇ. ೫ರ ವಿಮಾ ಮೊತ್ತ ರೂ. ೨,೩೫೦ ಹಾಗೂ ಅಡಿಕೆ ಬೆಳೆಗೆ ರೂ. ೬,೪೦೦ ಪ್ರತಿ ಹೆಕ್ಟೇರ್ ಪಾವತಿಸಬೇಕಾಗಿರುತ್ತದೆ. ವಿಮಾ ನೋಂದಣಿಗೆ ತಾ. ೩೧ ಕೊನೆಯ ದಿನವಾಗಿದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಮೊತ್ತವು ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ. ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ವಿಮೆ ಯೋಜನೆಯಡಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. ವಿಮೆ ಮಾಡಿಸಲು ಇಚ್ಚಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ ಪತ್ರ, ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ತಮ್ಮ ಹತ್ತಿರದ ಬ್ಯಾಂಕ್‌ಗಳಲ್ಲಿ ಅಥವಾ ಬೆಳೆ ಸಾಲ ಪಡೆಯದ ರೈತರು ಮಾತ್ರ ಗ್ರಾ.ಪಂ. ಮಟ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯೂ ಸಹ ವಿಮೆ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನಗೊಳಿಸಲು ಕೊಡಗು ಜಿಲ್ಲೆಗೆ ಕ್ಷೇಮಾ ಜನರಲ್ ಇನ್ಸೂರೆನ್ಸ್ ವಿಮಾ ಸಂಸ್ಥೆಯು ಹಂಚಿಕೆಯಾಗಿರುತ್ತದೆ. (ಸಹಾಯವಾಣಿ ಸಂಖ್ಯೆ ೦೮೦-೨೬೫೬೪೫೩೫, ೦೮೦-೨೬೫೬೪೫೩೬, ೦೮೦-೨೬೫೬೪೫೩೭)

ಹೆಚ್ಚಿನ ಮಾಹಿತಿಗೆ ಸಮೀಪದ ಬ್ಯಾಂಕ್ ಶಾಖೆ, ಕ್ಷೇಮಾ ಜನರಲ್ ಇನ್ಸೂರೆನ್ಸ್ ಕಂಪೆನಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಡಿಕೇರಿ ಮತ್ತು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟ ಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸ ಬಹುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.