ವೀರಾಜಪೇಟೆ, ಜು. ೩೧: ಆನ್‌ಲೈನ್ ಮೂಲಕ ಆಟೋರಿಕ್ಷಾ ಸೇರಿದಂತೆ ಬಾಡಿಗೆ ವಾಹನಗಳು ತಮ್ಮ ಬಳಿಗೆ ಬರುವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಯೊಂದಿಗೆ ಪರಿಹಾರ ಆ್ಯಪ್‌ಗೆ ಆಗಸ್ಟ್ ಮೊದಲ ವಾರ ವೀರಾಜಪೇಟೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ಸಿಗಲಿದೆ.

ನಿಮ್ಮ ಪರಿವಾರ- ನಿಮ್ಮ ಪರಿಹಾರ ಘೋಷ ವಾಕ್ಯದೊಂದಿಗೆ ಪರಿಹಾರ ಆ್ಯಪ್ ವಿನ್ಯಾಸಗೊಳ್ಳುತ್ತಿದೆ. ಇಂಜಿನಿಯರಿAಗ್ ಪದವೀಧರರಾಗಿರುವ ವೀರಾಜಪೇಟೆಯ ಯುವ ಉದ್ಯಮಿ ಪಿ.ವಿಷ್ಣು ಪರಮಶಿವ ಪರಿಹಾರ ಆ್ಯಪ್ ರೂಪಿಸಿದ್ದಾರೆ.

ವೀರಾಜಪೇಟೆಯಲ್ಲಿ ಉದ್ಯಮಿ ಪರಮಶಿವ ಅವರ ಪುತ್ರ ವಿಷ್ಣು ಕೊಡಗಿಗೆ ಹೊಸ ವ್ಯವಹಾರ ಪರಿಚಯಿಸುವ ಸಾಹಸಕ್ಕೆ ಮುಂದಾಗಿದ್ದು ಅದಕ್ಕೆ ನೂರಾರು ಸದಸ್ಯರನ್ನು ಹೊಂದಿರುವ ವೀರಾಜಪೇಟೆ ಆಟೋ ಚಾಲಕರ ಸಂಘ ಸಾಥ್ ನೀಡಿದೆ. ಇನ್ನೆರಡು ತಿಂಗಳೊಳಗೆ ಕೊಡಗು ಜಿಲ್ಲೆಯಾದ್ಯಂತ ಈ ಸೇವೆ ವಿಸ್ತಾರಗೊಳ್ಳಲಿದೆ. ಇದರೊಂದಿಗೆ ಆನ್‌ಲೈನ್ ಮೂಲಕವೇ ಪ್ರತಿಯೊಂದು ವ್ಯವಹಾರವೂ ಲಭ್ಯವಾಗುವಂತೆ ಮಾಡುವ ಸಿದ್ಧತೆ ನಡೆದಿದೆ.

ಮನೆಯಿಂದಲೆ ಎಲ್ಲವನ್ನು ಪಡೆಯುವ ಅವಕಾಶವನ್ನು ಆಧುನಿಕ ತಂತ್ರಜ್ಞಾನ ಕಲ್ಪಿಸಿದೆ. ಆನ್‌ಲೈನ್ ಮೂಲಕ ತಮ್ಮ ಪ್ರತಿಯೊಂದು ವ್ಯವಹಾರ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ನಗರ ಪ್ರದೇಶದಲ್ಲಿ ಆನ್‌ಲೈನ್ ಮೂಲಕವೇ ವ್ಯಾಪಾರ- ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಸ್ಪರ್ಧಾತ್ಮಕ ದರ ಮತ್ತು ಮನೆ ಬಾಗಿಲಿಗೆ ಉತ್ಪನ್ನ ಬರುತ್ತಿರುವುದರಿಂದ ಆನ್‌ಲೈನ್ ಟ್ರೆಂಡ್‌ಗೆ ಹೆಚ್ಚಿನ ಜನ ವಾಲಿದ್ದಾರೆ. ಇದೀಗ ಗ್ರಾಮೀಣ ಪ್ರದೇಶದ ಜನರೂ ಕೂಡ ಆನ್‌ಲೈನ್ ವ್ಯವಹಾರಕ್ಕೆ ಆಕರ್ಷಿತರಾಗಿದ್ದಾರೆ.

ಪ್ರಥಮ ಹಂತದಲ್ಲಿ ಆನ್‌ಲೈನ್ ಮೂಲಕ ವೀರಾಜಪೇಟೆಯಲ್ಲಿ ಆಟೋ ರಿಕ್ಷಾ ಬುಕ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ತಾವು ಇರುವ ಸ್ಥಳಕ್ಕೆ ಆಟೋಗಳು ಬರುವ ಸವಲತ್ತು ಲಭ್ಯವಾಗಲಿದೆ. ತಾವು ಇರುವ ಸ್ಥಳದಿಂದ ತೆರಳಬೇಕಾದ ಸ್ಥಳಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿದಾಗ, ಸಮೀಪದಲ್ಲಿರುವ ಆಟೋ ತಮ್ಮ ಬಳಿಗೆ ಬರಲಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಆ್ಯಪ್ ಕಾರ್ಯ ನಿರ್ವಹಿಸಲಿದೆ.

ಆಟೋ ಸೇವೆ ಬಳಿಕ ಕಾರು, ಜೀಪು, ಗೂಡ್ಸ್ ವಾಹನಗಳು ಕೂಡ ಪರಿಹಾರ ಆ್ಯಪ್ ಮೂಲಕ ಲಭ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ. ಹಣ್ಣುಹಂಪಲು, ತರಕಾರಿ, ಆಹಾರ ಪದಾರ್ಥ, ಔಷಧಿ ಸೇರಿದಂತೆ ಪ್ರತಿಯೊಂದು ಉತ್ಪನ್ನ ಮತ್ತು ಸವಲತ್ತುಗಳನ್ನು ಮನೆಯಿಂದಲೇ ಪಡೆದುಕೊಳ್ಳುವ ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗುತ್ತಿದೆ.

ಕೊಡಗಿನಲ್ಲಿ ನೆಲೆಸಿರುವವರು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಆ್ಯಪ್ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಆಟೋ ಸೇವೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್ ಮೊದಲ ವಾರ ಚಾಲನೆಗೊಳ್ಳಲಿದ್ದು, ವೀರಾಜಪೇಟೆ ನಗರದಲ್ಲಿ ಆಟೋ ಸೇವೆ ಪ್ರಾರಂಭವಾಗಲಿದೆ. ಇನ್ನೆರಡು ತಿಂಗಳಲ್ಲಿ ಜಿಲ್ಲೆಯಾದ್ಯಂತ ಸೇವೆ ಲಭ್ಯವಾಗುವಂತೆ ಮಾಡಲಾಗುತ್ತದೆ.

-ವಿಷ್ಣು ಪರಮಶಿವ, ಪರಿಹಾರ ಆ್ಯಪ್ ರೂವಾರಿ