ಮಡಿಕೇರಿ, ಜು. ೩೧: ಗೋಣಿಕೊಪ್ಪಲು, ಅರುವತೊಕ್ಕಲುವಿನಲ್ಲಿರುವ ಕಾಫಿ ಮಂಡಳಿಯ ವತಿಯಿಂದ ಇತ್ತೀಚೆಗೆ ಬಾಡಗರಕೇರಿ ಗ್ರಾಮದಲ್ಲಿನ ಮರೆನಾಡ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕಾಫಿ ಬೆಳೆ ಹಾಗೂ ನಿರ್ವಹಣೆ ಕುರಿತಾಗಿ ವಿಚಾರ ಸಂಕಿರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ|| ಚೇತನ್ ಅವರು ಕಂಬ ಚಿಗುರಿನಿಂದ ಕಾಫಿ ಗಿಡ ಬೆಳೆಸುವುದು, ತೋಟದ ನಿರ್ವಹಣೆ, ಗೊಬ್ಬರ ಬಳಕೆ, ಮಣ್ಣು ಪರೀಕ್ಷೆ, ಕಪಾತು, ಮತ್ತಿತರ ಪ್ರಮುಖ ಅಂಶಗಳ ಬಗ್ಗೆ ಬೆಳೆಗಾರರಿಗೆ ಸಮಗ್ರವಾದ ವಿವರಣೆಯನ್ನು ನೀಡಿದರು. ಕಾಫಿ ಮಂಡಳಿಯ ಸಹಾಯ ಧನದ ವಿಚಾರವಾಗಿ ಎ.ಇ.ಓ. ಸುನಿಲ್ ಕುಮಾರ್ ಅವರು ಮಾಹಿತಿ ನೀಡಿದರು. ಹಿರಿಯ ಲೈಸನ್ ಆಫೀಸರ್ ಶ್ರೀರಮಣ, ಎ.ಇ.ಓ. ಹಫೀದಾ ಅವರುಗಳು ಹಾಜರಿದ್ದು, ಮಾಹಿತಿಯಿತ್ತರು. ಕ್ಲಬ್‌ನ ಅಧ್ಯಕ್ಷ ಕಾಯಪಂಡ ಸ್ಟಾö್ಯಲಿನ್ ಗಣಪತಿ, ಉಪಾಧ್ಯಕ್ಷರಾದ ಕುಪ್ಪುಡೀರ ಪೊನ್ನು ಮುತ್ತಪ್ಪ, ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಕೈಬುಲಿರ ಹರೀಶ್ ಅಪ್ಪಯ್ಯ ಸೇರಿದಂತೆ ಗ್ರಾಮದ ಬೆಳೆಗಾರರು ಪಾಲ್ಗೊಂಡು ಚರ್ಚೆಗಳ ಮೂಲಕ ಮಾಹಿತಿ ಪಡೆದುಕೊಂಡರು.