ಶನಿವಾರಸಂತೆ, ಜು. ೩೦: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಶುಕ್ರವಾರ ಆಗಾಗ್ಗೆ ಬಿಡುವು ನೀಡುತ್ತಾ ಸಾಧಾರಣ ಮಳೆ ಸುರಿಯಿತು. ಅಧಿಕ ಮಳೆಯಿಂದಾಗಿ ಮಂದಗತಿಯಲ್ಲಿ ಸಾಗುತ್ತಿದ್ದ ಕೃಷಿ ಚಟುವಟಿಕೆ ಮತ್ತೆ ಚುರುಕು ಕಂಡಿದೆ. ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. ೩೦ ರಷ್ಟು ಗದ್ದೆಗಳಲ್ಲಿ ಮಾತ್ರ ರೈತರು ಭತ್ತದ ಬೇಸಾಯ ಮಾಡುತ್ತಿದ್ದಾರೆ. ಶೇ. ೭೦ ರಷ್ಟು ಗದ್ದೆಗಳಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಕ್ಯಾತನಳ್ಳಿ ಗ್ರಾಮದಲ್ಲಿ ಗದ್ದೆಗಳನ್ನು ಪಾಳು ಬಿಡಲಾಗಿದೆ.
ಶಿಡಿಗಳಲೆ ಗ್ರಾಮದ ಗದ್ದೆಯಲ್ಲಿ ಕೃಷಿ ಇಲಾಖೆ ವಿತರಿಸಿದ ಹೊಸ ತಳಿ ಹೈಬ್ರೀಡ್ ಎಸ್ ೫,೪೦೮ ಎಂಬ ಭತ್ತ ಬೀಜವನ್ನು ಅಗೆ ಹಾಕಲಾಗಿದೆ. ಶಿಡಿಗಳಲೆ ಗ್ರಾಮದಲ್ಲಿ ನಾಲ್ವರು ರೈತರು ಮಾತ್ರ ಮನೆಯಲ್ಲಿ ಊಟಕ್ಕಾಗಿ ಭತ್ತದ ಬೀಜದ ಅಗೆ ಹಾಕಿದ್ದು ಸಸಿ ಮಡಿ ಬಂದು ಒಂದು ವಾರ ಆಗಿದೆ. ೧೫ ದಿನಗಳಲ್ಲಿ ನಾಟಿ ಮಾಡುತ್ತೇವೆ. ಗದ್ದೆಯಲ್ಲಿ ಬದು ಸ್ವಚ್ಛಗೊಳಿಸುವ ಕೆಲಸ ಮುಗಿದಿದ್ದು ಮುಂದಿನ ವಾರ ಕೆಸರು ಉಳುಮೆ ಮಾಡಬೇಕು. ಅಲ್ಪಾವಧಿ ಭತ್ತದ ತಳಿ ಈ ವರ್ಷ ಬೆಳೆಯುವುದು. ಕೆಲ ರೈತರಾದರೂ ಭತ್ತ ಬೆಳೆಯದಿದ್ದರೇ ಮುಂದಿನ ಪೀಳಿಗೆ ೧೦ ವರ್ಷಗಳ ನಂತರ ಭತ್ತವನ್ನು ಚಿತ್ತದಲ್ಲಿ ನೋಡಬೇಕಾಗುತ್ತದೆ ಎಂದು ಕೃಷಿಕ ಎಸ್.ಎಂ. ಉಮಾಶಂಕರ್ ಬೇಸರ ವ್ಯಕ್ತಪಡಿಸಿದರು.
ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕಾಲಕ್ಕೆ ಬೀಜದ ಭತ್ತ ಸಿಗದಿದ್ದ ಕಾರಣಕ್ಕೆ ಕೆಲವು ರೈತರು ಗದ್ದೆಗಳಲ್ಲಿ ಅಗೆ ಹಾಕಲು ಬೇರೆ ಊರುಗಳಿಂದ ಬೀಜದ ಭತ್ತ ತಂದಿದ್ದರು. ಇದೀಗ ವಿ.ಎನ್.ಆರ್., ಅಡ್ವಂಟ, ತುಂಗಾ ಭತ್ತದ ಬೀಜದ ಸಸಿಮಡಿ ಬೆಳೆದು ನಿಂತಿದ್ದು ೧೫ ದಿನಗಳೊಳಗೆ ನಾಟಿ ಕಾರ್ಯ ಮಾಡಲು ಸಿದ್ಧತೆ ನಡೆದಿದೆ. ಪಂಚಾಯಿತಿ ವ್ಯಾಪ್ತಿಯ ೨ ಎಕರೆಯಷ್ಟು ಗದ್ದೆಗಳಲ್ಲಿ ಶೇ. ೧೫ ಭಾಗ ಮಾತ್ರ ನಾಟಿ ಕಾರ್ಯ ಮುಗಿದಿದೆ. ಕಾಜೂರು, ಮಾದ್ರೆ, ದುಂಡಳ್ಳಿ, ಬಿಳಾಹ ಗ್ರಾಮಗಳ ಗದ್ದೆಗಳಲ್ಲಿ ರೈತರು ನಾಟಿಗಾಗಿ ಗದ್ದೆಗಳ ಬದುವು ಸರಿಮಾಡುತ್ತಿದ್ದಾರೆ.
ಪುಷ್ಯ ಮಳೆಯಿಂದಾಗಿ ಹೊಳೆ, ತೊರೆ, ಕೆರೆ, ಕುಂಟೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು ಗದ್ದೆಗಳಲ್ಲೂ ನೀರಾಗಿದ್ದು ಬೆರಳೆಣಿಕೆಯ ರೈತರಿಂದಾಗಿ ಭತ್ತದ ಬೇಸಾಯ ನಿರಾತಂಕವಾಗಿ ಸಾಗಿದೆ.