ಮುಳ್ಳೂರು, ಜು. ೩೦: ಆದಿ ಚುಂಚನಗಿರಿ ಸಂಸ್ಥಾನ ಪೀಠದ ಜಗದ್ಗುರು ಶ್ರೀ ಬಾಲಗಂಗಾಧರ ಸ್ವಾಮೀಜಿಯವರು ಒಕ್ಕಲಿಗ ಸಮುದಾಯದ ಗುರುವಾಗಿ ಜಗತ್ತಿಗೆ ಜಗದ್ಗುರುಗಳಾಗಿ ಹಾಗೂ ಸನಾತನ ಸಂಸ್ಕೃತಿಯಲ್ಲಿ ಸಮಾಜವನ್ನು ಮೇಲೆತ್ತಿ ವಿದ್ಯಾವಂತರನ್ನಾಗಿ ಮಾಡಿರುವ ಮೂಲಕ ಅವರ ನಿಸ್ವಾರ್ಥ ಸೇವೆಯ ಅಡಿಯಲ್ಲಿ ಸಮಾಜದ ಬಾಂಧವರು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಹಾಸನದ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಮೂದರಳ್ಳಿ ಗ್ರಾಮದಲ್ಲಿ ನಡೆದ ೮ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆದಿ ಚುಂಚನಗಿರಿ ಮಠದ ಗುರುಗಳ, ಹಿರಿಯರ ಮಾರ್ಗದರ್ಶನದಲ್ಲಿ ಇಂದು ಒಕ್ಕಲಿಗ ಸಮುದಾಯವು ದಾರಿ ತಪ್ಪದಂತೆ ಅಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮಾಜದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉತ್ತಮ ವಾದ ಕಾರ್ಯಮಾಡುತ್ತಿದೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯುವಕರು ಮಾಡುವ ಮೂಲಕ ಸಮು ದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಕ್ಕಲಿಗ ಸಮುದಾಯದ ಅನೇ ಕರು ಶಿಕ್ಷಣ, ಕ್ರೀಡೆ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದು, ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅನೇಕ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಯುವ ಜನಾಂಗ ಅಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿ ಕೊಳ್ಳುವುದರ ಜೊತೆಯಲ್ಲಿ ಸಾಂಸ್ಕೃತಿಕ, ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಕೆಸರು ಗದ್ದೆ ಕ್ರೀಡೆಯು ಗ್ರಾಮೀಣ ಕ್ರ‍್ರೀಡೆಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಯುವ ಕರು ಕೆಸರುಗದ್ದೆ ಕ್ರೀಡಾಕೂಟ ವನ್ನು ಕಳೆದ ೮ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಈ ಮೂಲಕ ಸಮು ದಾಯವನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುತ್ತಣ್ಣ, ಒಕ್ಕಲಿಗ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ತಾಲೂಕು ಯುವ ವೇದಿಕೆ ಗೌರವಾಧ್ಯಕ್ಷ ದೀಪಕ್, ಮೂದರಳ್ಳಿ ವಿನಾಯಕ ಯುವಕ ಸಂಘದ ಅಧ್ಯಕ್ಷ ವಿನೋದ್, ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೂವಯ್ಯ, ಪ್ರಮುಖರಾದ ಮಿಥುನ್ ಹಾನಗಲ್, ಎಚ್.ಆರ್.ಸುರೇಶ್, ನಂದಕುಮಾರ್ ಮುಂತಾದವರು ಇದ್ದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳು ಜರುಗಿದವು.