ಪೊನ್ನಂಪೇಟೆ, ಜು. ೩೦: ದಕ್ಷಿಣ ಕೊಡಗಿನಲ್ಲಿ ಮತ್ತೆ ವ್ಯಾಘ್ರ ಅಟ್ಟಹಾಸ ಮುಂದುವರಿದಿದ್ದು, ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಈಚೂರು ಗ್ರಾಮದಲ್ಲಿ ಗ್ರಾ.ಪಂ. ಅಧ್ಯಕ್ಷ ಗುಮ್ಮಟಿರ ದರ್ಶನ್ ನಂಜಪ್ಪ ಅವರಿಗೆ ಸೇರಿದ ಕರು ಹುಲಿಯ ದಾಳಿಗೆ ಬಲಿಯಾಗಿದೆ.
ತಾ.೨೮ ರಂದು ಕೊಟ್ಟಿಗೆಯ ಬಳಿ ಕಟ್ಟಿದ್ದ ಮೂರು ಕರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಒಂದು ಕರು ಹುಲಿ ದಾಳಿಗೆ ಬಲಿಯಾಗಿದೆ. ಮತ್ತೊಂದು ಕರುವಿನ ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಂದು ಕರು ಕಾಣೆಯಾಗಿದ್ದು ಅದು ಕೂಡ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯವಲಯಾಧಿಕಾರಿ ದಿವಾಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ. ಪರಿಶೀಲಿಸಿ ಹುಲಿ ಪತ್ತೆಗೆ ಕ್ಯಾಮರ ಅಳವಡಿಸಿದ್ದಾರೆ.
ಅರಣ್ಯ ಇಲಾಖೆ ಆದಷ್ಟು ಬೇಗ ಜಾನುವಾರು ಭಕ್ಷಕ ಹುಲಿಯನ್ನು ಹಿಡಿದು, ಆತಂಕವನ್ನು ದೂರಮಾಡುವಂತೆ ಹಾಗೂ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.