ಸೋಮವಾರಪೇಟೆ, ಜು.೩೦ : ಇಲ್ಲಿನ ಮಹಿಳಾ ಸಮಾಜದಲ್ಲಿ ಬಿ.ಬಿ. ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಬಿ.ಬಿ. ಶಿವಪ್ಪ ಅವರ ೬ನೇ ವರ್ಷದ ಪುಣ್ಯಸ್ಮರಣೆ ಕಾಯಕ್ರಮ ನಡೆಯಿತು. ಅತಿಥಿಗಳಾಗಿ ಪಾಲ್ಗೊಂಡ ಸಕಲೇಶಪುರ ಶಾಸಕ ಮಂಜು, ಬಿ.ಬಿ. ಶಿವಪ್ಪ ಹಾಗೂ ಅವರ ಪತ್ನಿ ಸುಶೀಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಮಂಜು ಶಿವಪ್ಪನವರು ತಮ್ಮ ಆಸ್ತಿ ಮಾರಾಟವಾದರೂ ಸಮಸ್ಯೆಯಿಲ್ಲ; ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತೇನೆ ಎಂದು ಪಣತೊಟ್ಟು ಪಕ್ಷ ಸಂಘಟನೆಗೆ ಶ್ರಮಿಸಿದವರು. ತಮ್ಮ ಸ್ವಂತ ಖರ್ಚಿನಲ್ಲಿ ರಾಜ್ಯವ್ಯಾಪಿ ಸಂಚರಿಸಿ ಬಿಜೆಪಿಯನ್ನು ಸಂಘಟಿಸಿದರ ಫಲವಾಗಿ ಇಂದು ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ ಎಂದರು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕರ್ನಾಟಕದ ಬಿಜೆಪಿಗೆ ಶಿವಪ್ಪ ಹಾಗೂ ಸುಶೀಲಮ್ಮ ಅವರು ಮಾತಾ-ಪಿತೃಗಳಿದ್ದಂತೆ. ಶಿವಪ್ಪ ಅವರು ಯಾವತ್ತೂ ಅಧಿಕಾರಕ್ಕಾಗಿ ಪಕ್ಷ ಸಂಘಟಿಸಿದವರಲ್ಲ. ಹಿಂದೆ ೪೪ ಮಂದಿ ಬಿಜೆಪಿ ಶಾಸಕರಿದ್ದ ಸಂದರ್ಭ ಬಿ.ಬಿ. ಶಿವಪ್ಪ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವಾಗ ನಾನು ಸೇರಿದಂತೆ ಕೇವಲ ೧೨ ಮಂದಿ ಮಾತ್ರ ಅವರ ಪರವಾಗಿ ಮತ ಚಲಾಯಿಸಿದ್ದು ಬೇಸರದ ಸಂಗತಿಯಾಗಿತ್ತು ಎಂದರು.

ಭಾಜಪದ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಪುಣ್ಯಸ್ಮರಣಾ ಕಾರ್ಯಕ್ರಮದ ಮೂಲಕ ಬಿ.ಬಿ. ಶಿವಪ್ಪ ಅವರ ಉತ್ತಮ ಕಾರ್ಯ ಗಳನ್ನು ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ವೇದಿಕೆಯಲ್ಲಿ ಬಿ.ಬಿ. ಶಿವಪ್ಪ ಅವರ ಪುತ್ರ ಪ್ರತಾಪ್, ಕಾರ್ಯಕ್ರಮದ ಉಸ್ತುವಾರಿ ಬಿ.ಟಿ. ತಿಮ್ಮಶೆಟ್ಟಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾಲಂಬಿ ಪ್ರೇಮನಾಥ್ ಮಾತನಾಡಿದರು, ಕೆ.ಎನ್. ಶಿವಕುಮಾರ್ ವಂದಿಸಿದರು.