ಸೋಮವಾರಪೇಟೆ, ಜು. ೨೬: ಮಳೆಹಾನಿ ಪೀಡಿತ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆ ಸಂಪರ್ಕ ರಸ್ತೆಯ ಆಲೇಕಟ್ಟೆ ಬಳಿಯಲ್ಲಿ ರಸ್ತೆಯ ಒಂದು ಬದಿ ಕುಸಿಯುತ್ತಿರುವುದನ್ನು ಶಾಸಕರು ವೀಕ್ಷಿಸಿದರು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಒಂದು ವೇಳೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡರೆ ಐದಾರು ಕಿ.ಮೀ. ಬಳಸು ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದು ಸ್ಥಳೀಯರು ಗಮನ ಸೆಳೆದರು.

ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಶಾಸಕರು ತಿಳಿಸಿದರು. ನಂತರ ಮಳೆಯಿಂದ ಕುಸಿದಿರುವ ಹಾನಗಲ್ಲು ಬಾಣೆ ಗ್ರಾಮದ ದಿ. ಲೀಲಾ ಕೃಷ್ಣಪ್ಪ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಎಸ್‌ಎನ್. ನರಗುಂದ್, ಕಂದಾಯ ಪರಿವೀಕ್ಷಕ ಪ್ರಹ್ಲಾದ್, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾ.ಪಂ. ಉಪಾಧ್ಯಕ್ಷ ಮಿಥುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮನೆಗೆ ಹಾನಿ: ಮಳೆಯಿಂದಾಗಿ ಕೊಡ್ಲಿಪೇಟೆ ಹೋಬಳಿಯ ಶಿರಂಗಾಲ ಗ್ರಾಮದ ರತ್ನ ಸ್ವಾಮಿ ಅವರ ವಾಸದ ಮನೆಯ ಹಿಂಭಾಗ ಕುಸಿದಿದ್ದು, ಶೇ.೨೦ರಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.