ಗೋಣಿಕೊಪ್ಪಲು, ಜು. ೨೬: ಮಳೆಯ ನಡುವೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಬೆಳ್ಳಂಬೆಳಿಗ್ಗೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕಿಸಿದರು.

ಮಳೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಪೊನ್ನಣ್ಣ, ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ಗಿರಿಜನರ ಸಮಸ್ಯೆಗಳನ್ನು ಆಲಿಸಿದರು.

ಕಳೆದ ಎರಡು ದಿನಗಳ ಹಿಂದೆ ಗಿರಿಜನರು ವಾಸಮಾಡುವ ಬಸವೇಶ್ವರ ಬಡಾವಣೆಗೆ ತೆರಳುವ ಸೇತುವೆಯು ನೀರಿನಿಂದ ಆವರಿಸಿಕೊಂಡಿತ್ತು. ಇದರಿಂದಾಗಿ ಈ ಭಾಗದ ಗಿರಿಜನರು ಬದಲಿ ಮಾರ್ಗದ ಕಾಫಿ ತೋಟದ ಮೂಲಕ ತಮ್ಮ ಮನೆಗಳಿಗೆ ತೆರಳಬೇಕಾಗಿತ್ತು. ಬಡಾವಣೆಗೆ ಸಂಪರ್ಕಿಸುವ ಏಕೈಕ ಸಂಪರ್ಕ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಸೇತುವೆಯು ಕೆಳಮಟ್ಟದಲ್ಲಿರುವುದರಿಂದ ಇಲ್ಲಿ ಹರಿಯುವ ನೀರು ಸೇತುವೆಯ ಮೇಲ್ಭಾಗಕ್ಕೆ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಓಡಾಟ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ವಸ್ತುಸ್ಥಿತಿಯನ್ನು ಪರಿಶೀಲಿಸಲು ಪೊನ್ನಣ್ಣ ಆಗಮಿಸಿದ್ದರು. ಈ ವೇಳೆ ಬಡಾವಣೆಯ ಗಿರಿಜನ ಮುಖಂಡರಾದ ಗಪ್ಪು, ಶಾಸಕರಿಗೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಕೆಲವು ವರ್ಷಗಳ ಹಿಂದೆ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆಯ ಎರಡು ಬದಿಯಲ್ಲಿಯೂ ತಡೆಗೋಡೆ ಇಲ್ಲದೆ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಶಾಲಾ ಮಕ್ಕಳು ಓಡಾಟ ನಡೆಸುತ್ತಾರೆ. ಸೇತುವೆಗೆ ತಡೆ ಇಲ್ಲದೆ ಇರುವುದರಿಂದ ಸಮಸ್ಯೆ ಎದುರಾಗಬಹುದು. ಅಲ್ಲದೆ, ಸೇತುವೆ ಅತ್ಯಂತ ಕೆಳಮಟ್ಟದಲ್ಲಿ ಕಟ್ಟಲಾಗಿದೆ. ಇದನ್ನು ಎತ್ತರಿಸಬೇಕೆಂದು ಶಾಸಕರ ಗಮನ ಸೆಳೆದರು.

ಸೇತುವೆ ಪರಿಶೀಲನೆ ನಡೆಸಿದ ನಂತರ ಬಡಾವಣೆಯ ಗಿರಿಜನರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಹಾಡಿಯ ಪ್ರಮುಖರಾದ ಗಿರಿಜನರ ಸೀತೆ ಮಾತನಾಡಿ, ಈ ಭಾಗದಲ್ಲಿ ೨೮ ಸಣ್ಣ ಮಕ್ಕಳಿದ್ದು ಇನ್ನೂ ಕೂಡ ಅಂಗನವಾಡಿ ನಿರ್ಮಾಣಕ್ಕೆ ಪ್ರಯತ್ನ ಮಾಡಿಲ್ಲ. ಹೀಗಾಗಿ ಗಿರಿಜನ ಮಕ್ಕಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಿವೇಶನ ಖಾಲಿ ಇದ್ದರೂ ಅಂಗನವಾಗಿ ನಿರ್ಮಾಣಕ್ಕೆ ಪ್ರಯತ್ನಗಳು ಆಗಿಲ್ಲ.

ಸಮೀಪದಲ್ಲಿಯೇ ನದಿ ನೀರು ಹರಿಯುತ್ತಿದ್ದರೂ ಕುಡಿಯುವ ನೀರು ಸರಿಯಾಗಿ ಇಲ್ಲಿನ ನಿವಾಸಿಗಳಿಗೆ ಲಭಿಸುತ್ತಿಲ್ಲ. ಪ್ರತಿನಿತ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಪಂಚಾಯಿತಿ ಮೂಲಕ ನಲ್ಲಿಯಲ್ಲಿ ಸರಬರಾಜು ಆಗುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಇಲ್ಲಿನ ಮಕ್ಕಳು ಶಾಲೆಗೆ ತೆರಳಲು ಬರುತ್ತಿರುವ ಸರ್ಕಾರಿ ಬಸ್ಸು ನಿಗದಿತ ಸಮಯಕ್ಕೆ ಆಗಮಿಸುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಗಿರಿಜನರ ಸಮಸ್ಯೆಗಳನ್ನು ಆಲಿಸಿದ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಸ್ಥಳದಲ್ಲಿದ್ದ ಹಾತೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣನವರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರಕುವಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ಶಾಲಾ ಮಕ್ಕಳ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಸರ್ಕಾರದಿಂದ ಬಿಡುಗಡೆಯಾಗಿರುವ ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ಕುಟುಂಬಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಗಿರಿಜನರಿಗೆ ತಿಳಿಸಿದರು. ಲಭ್ಯವಿರುವ ಖಾಲಿ ನಿವೇಶನದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಬೇಕಾದ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ೭ ವರ್ಷದಿಂದ ಈ ಬಡಾವಣೆಯಲ್ಲಿ ಟಾರ್ಪಲ್ ಮೂಲಕ ಕಟ್ಟಿಕೊಂಡಿರುವ ಶೆಡ್‌ಗಳಲ್ಲಿ ವಾಸವಿದ್ದೇವೆ. ನಿರಂತರ ಹೋರಾಟದ ಮೂಲಕ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ೨೦ ಮನೆಗಳ ನಿರ್ಮಾಣ ಆರಂಭವಾಗಿದೆ. ಉಳಿದ ಕುಟುಂಬಗಳಿಗೆ ಮನೆ ಮಂಜೂರಾತಿ ತುರ್ತಾಗಿ ಮಾಡಿಕೊಡುವಂತೆ ಹೋರಾಟಗಾರ ಯರವರ ಗಪ್ಪು ಪ್ರಸ್ತಾಪಿಸಿದರು.

ಶಾಸಕರ ಮಾತಿಗೆ ಉತ್ತರಿಸಿದ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಇಲಾಖೆಯಲ್ಲಿ ಗಿರಿಜನರ ಮನೆ ನಿರ್ಮಾಣಕ್ಕೆ ಬೇಕಾದ ಹಣವೂ ಲಭ್ಯವಿದ್ದು ಅರ್ಹ ಗಿರಿಜನರಿಗೆ ಮನೆ ಮಂಜೂರಾತಿ ನಡೆಯುತ್ತಿದೆ. ಈ ಭಾಗದಲ್ಲಿ ೮೦ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದಾರೆ. ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಹಂತಹAತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಾಸÀಕರ ಭೇಟಿ ವೇಳೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪ್ರ.ಕಾರ್ಯದರ್ಶಿ ಎ.ಜೆ.ಬಾಬು, ಮಹಿಳಾ ಕಾಂಗ್ರೆಸ್‌ನ ಕಡೆಮಾಡ ಕುಸುಮ, ನೂರೆರ ಧನ್ಯ, ಪುಲಿಯಂಡ ರೋಶನ್, ಹಾತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೊಕ್ಕಂಡ ಗಿಣಿ ಗಣಪತಿ, ಕಾಂಗ್ರೆಸ್ ಪ್ರಮುಖರಾದ ಕೊಕ್ಕಂಡ ರೋಶನ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ಹಾತೂರು ಗ್ರಾಮ ಪಂಚಾಯಿತಿ ಪಿಡಿಒ ಉಸ್ಮಾ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.