ಸೋಮವಾರಪೇಟೆ, ಜು. ೨೭: ತಾಲೂಕಿನಾದ್ಯಂತ ಮಳೆ ಮುಂದು ವರೆದಿದ್ದು, ಮಳೆಯೊಂದಿಗೆ ಗಾಳಿಯೂ ರಭಸಗೊಳ್ಳುತ್ತಿರುವ ಹಿನ್ನೆಲೆ ಅಲ್ಲಲ್ಲಿ ಮರುಗಳು ಧರಾಶಾಹಿಯಾಗುತ್ತಿವೆ. ಹರಗ ಗ್ರಾಮದಲ್ಲಿ ಶೀತಮಯ ವಾತಾವರಣದಲ್ಲಿ ಹಸುವೊಂದು ಮೃತಪಟ್ಟಿದೆ.

ಕಳೆದ ೨೪ ಗಂಟೆಗಳಲ್ಲಿ ಸೋಮ ವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ೩೩.೬ ಮಿ.ಮೀ., ಕೊಡ್ಲಿ ಪೇಟೆಗೆ ೧೫.೨, ಶನಿವಾರಸಂತೆಗೆ ೧೮.೮, ಶಾಂತಳ್ಳಿಗೆ ೪೬ ಮಿ.ಮೀ. ಮಳೆ ಯಾದ ಬಗ್ಗೆ ವರದಿಯಾಗಿದೆ.

ಶಾಂತಳ್ಳಿ ಹೋಬಳಿಯಾದ್ಯಂತ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿನ ಶೀತಕ್ಕೆ ಹರಗ ಗ್ರಾಮದಲ್ಲಿ ಜಾನುವಾರು ಮೃತ ಪಟ್ಟಿದೆ. ಗ್ರಾಮದ ಬಿ.ಸಿ. ಪೊನ್ನಪ್ಪ ಅವ ರಿಗೆ ಸೇರಿದ ೮ ವರ್ಷದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಗದ್ದೆ ಯಲ್ಲಿ ಸಾವನ್ನಪ್ಪಿದ್ದು, ಕಂದಾಯ ಇಲಾಖೆಯ ಕರಿಬಸಪ್ಪ ಅವರು ಪಶು ವೈದ್ಯಕೀಯ ಇಲಾಖಾ ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತಾಲೂಕಿನ ಗರಗಂದೂರು ಗ್ರಾಮದ ಎಂ.ಎ. ಶರೀಫ್ ಅವರಿಗೆ ಸೇರಿದ ವಾಸದ ಮನೆಯ ಮೇಲೆ ಮರವೊಂದು ಬಿದ್ದು, ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರಾದ ದೀಪಿಕಾ ಅವರು ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ.

ಮಳೆಯೊಂದಿಗೆ ಗಾಳಿಯ ರಭಸ ಅಧಿಕವಾಗಿರುವ ಹಿನ್ನೆಲೆ ಅಲ್ಲಲ್ಲಿ ಮರ ಗಳು ನೆಲಕ್ಕುರುಳುತ್ತಿವೆ. ತೋಳೂರು ಶೆಟ್ಟಳ್ಳಿ ಮುಖ್ಯ ರಸ್ತೆಯಲ್ಲಿ ಮರ ಬಿದ್ದಿದ್ದ ರಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ವಿದ್ಯುತ್ ಇಲಾಖಾ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದಾರೆ.

ಊರೊಳಗಿನ ಕೊಪ್ಪ ಗ್ರಾಮದ ಪಾರ್ವತಿ ಅವರ ಮನೆ ಮೇಲೆ ಬಿದ್ದಿದ್ದ ಮರವನ್ನು ಸ್ಥಳೀಯರ ಸಹಕಾರದಿಂದ ತೆರವು ಗೊಳಿಸಲಾಗಿದೆ. ಅದೃಷ್ಟವಶಾತ್ ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾಫಿ ತೋಟಗಳಲ್ಲಿ ಹೆಚ್ಚಿನ ಮರಗಳು ಉರುಳಿ ಕಾಫಿ ಗಿಡಗಳು ಮುರಿಯಲ್ಪಟ್ಟಿವೆ. ಹರಗ ಗ್ರಾಮದ ಶರಣ್ ಗೌಡ ಅವರಿಗೆ ಸೇರಿದ ತೋಟದಲ್ಲಿ ಐದಾರು ಮರಗಳು ಉರುಳಿರುವ ಪರಿಣಾಮ ಕಾಫಿ ಗಿಡಗಳು ನಷ್ಟಗೊಂಡಿವೆ.