ಬೆಂಗಳೂರು, ಜು. ೨೭: ಹಿಂದುಳಿದ ಆಯೋಗ ಹಾಗೂ ನ್ಯಾಯಾಲಯದ ಸಲಹೆಯಂತೆ ಹಿಂದುಳಿದ ವರ್ಗದ ೩ಎ ಪಟ್ಟಿಯಲ್ಲಿರುವ `ಕೊಡಗರು' ಎಂಬುದರ ಬದಲಾಗಿ `ಕೊಡವ ಅಥವಾ ಕೊಡವರು' ಎಂದು ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮಾಹಿತಿ ನೀಡಿದರು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ `ಕೊಡವರು' ಎಂದು ದಾಖಲೆಗಳಲ್ಲಿ ಬಳಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಈ ಬಗ್ಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ ೧೪ ವರ್ಷಗಳಿಂದ ಸರಕಾರ ಹಾಗೂ ಡಾ. ದ್ವಾರಕನಾಥ್ ಆಯೋಗದ ಗಮನ ಸೆಳೆದಿತ್ತು. ಇತ್ತೀಚೆಗಷ್ಟೆ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಮೂಲಕ ಸಿ.ಎನ್.ಸಿ. ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದರು.